ಬೆಂಗಳೂರು: ಸರಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಯನ್ನು 15 ದಿನಗಳ ಕಾಲ ವಿಸ್ತರಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಸರಕಾರದ ಎಲ್ಲಾ ಇಲಾಖೆಗಳ ಸರಕಾರಿ ನೌಕರರ ವರ್ಗಾವಣೆ ಅವಧಿ ಇಂದಿಗೆ (ಜೂನ್ 15) ಅಂತ್ಯಗೊಂಡಿತ್ತು. ಬಹಳಷ್ಟು ಇಲಾಖೆಗಳ ನೌಕರರ ವರ್ಗಾವಣೆ ಇನ್ನೂ ಬಾಕಿ ಉಳಿದಿದ್ದು ಜೂನ್ ತಿಂಗಳ ಅಂತ್ಯದವರೆಗೆ ವರ್ಗಾವಣೆ ಅವಧಿಯನ್ನು ವಿಸ್ತರಿಸಲಾಗಿದೆ.
ವಿಧಾನ ಪರಿಷತ್ ಚುನಾವಣೆ, ರಾಜ್ಯಸಭೆ ಚುನಾವಣೆ ಹಾಗು ರಾಜ್ಯದಲ್ಲಿ ಧಾರಾಕಾರವಾಗಿ ಸುರಿದ ಪೂರ್ವ ಮುಂಗಾರು ಮಳೆಯಿಂದಾದ ಹಾನಿ ನಿರ್ವಹಣೆಯಲ್ಲಿ ಸಚಿವರು ಮತ್ತು ಅಧಿಕಾರಿಶಾಹಿ ಭಾಗಿಯಾಗಿದ್ದರಿಂದ ನೌಕರರ ವರ್ಗಾವಣೆಯನ್ನು ನಿರೀಕ್ಷೆಯಂತೆ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ವರ್ಗಾವಣೆ ಅವಧಿ ಮುಂದೂಡಲಾಗಿದೆ ಎಂದು ಹೇಳಲಾಗಿದೆ.