ಬೆಂಗಳೂರು: ಏಳನೇ ಪರಿಷ್ಕೃತ ವೇತನ ಜಾರಿಗಾಗಿ ನಾಳೆಯಿಂದ (ಮಾರ್ಚ್ 1 ರಿಂದ) ರಾಜ್ಯ ಸರ್ಕಾರಿ ನೌಕರರು ಮುಷ್ಕರ ನಡೆಸಲು ಸಜ್ಜಾಗಿದ್ದಾರೆ. ಸರ್ಕಾರದ ಕಡೆಯಿಂದ ಈವರೆಗೆ ಯಾವುದೇ ಭರವಸೆ ಬಾರದೇ ಇರುವ ಕಾರಣ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರಾಗಿ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ಸಿಎಂ ಬೊಮ್ಮಾಯಿ ಸದನದಲ್ಲಿ ಮಾರ್ಚ್ ಅಂತ್ಯದೊಳಗೆ ಮಧ್ಯಂತರ ವರದಿ ಆಧಾರದಲ್ಲಿ ಏಳನೇ ಪರಿಷ್ಕೃತ ವೇತನ ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇದರಿಂದ ಸರ್ಕಾರಿ ನೌಕರರು ತೃಪ್ತರಾಗಿಲ್ಲ.
ಲಿಖಿತ ವಾಗ್ದಾನ ನೀಡುವಂತೆ ನೌಕರರು ಪಟ್ಟು ಹಿಡಿದಿದ್ದು, ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಮುಷ್ಕರಕ್ಕೆ ಮುಂದಾಗಿರುವ ಸರ್ಕಾರಿ ನೌಕರರನ್ನು ಕರೆಸಿ ಸರ್ಕಾರ ಮಾತುಕತೆ ನಡೆಸಲಿದೆ ಎಂದು ಹೇಳಲಾಗಿತ್ತು. ಇದುವರೆಗೆ ಸರ್ಕಾರದ ಕಡೆಯಿಂದ ಸರ್ಕಾರಿ ನೌಕರರ ಸಂಘಕ್ಕೆ ಮಾತುಕತೆಗೆ ಬರುವಂತೆ ಬುಲಾವ್ ಬಂದಿಲ್ಲ. ಸೋಮವಾರ ಸಿಎಂ ಬೊಮ್ಮಾಯಿ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದರಿಂದ ಇಂದು ಮಾತುಕತೆ ನಡೆಸುವ ವಿಶ್ವಾಸದಲ್ಲಿ ಸರ್ಕಾರಿ ನೌಕರರು ಇದ್ದಾರೆ.
ಈವರೆಗೆ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗದ ಕಾರಣ ಸರ್ಕಾರಿ ನೌಕರರು ಮುಷ್ಕರಕ್ಕೆ ಅಣಿಯಾಗಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರಿ ನೌಕರರ ಸಂಘ ಮುಷ್ಕರಕ್ಕಾಗಿ ಕೆಲ ಮಾರ್ಗಸೂಚಿಯನ್ನು ಹೊರಡಿಸಿದೆ. ರಾಜ್ಯದ ಎಲ್ಲಾ ಇಲಾಖೆಗಳ ವೃಂದ ಸಂಘಗಳ ಅಧ್ಯಕ್ಷರುಗಳು ತಮ್ಮ ಅಧೀನದಲ್ಲಿ ಬರುವ ಉಪಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ವೈಯುಕ್ತಿಕವಾಗಿ ಆಹ್ವಾನ ನೀಡುವ ಮೂಲಕ ಸಭೆಗಳನ್ನು ಏರ್ಪಡಿಸಿ ಮುಕ್ತವಾಗಿ ಚರ್ಚಿಸಿ ಅನಿರ್ದಿಷ್ಟಾವಧಿ ಮುಷ್ಕರವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದೆ.
ಇದನ್ನೂ ಓದಿ:ಬೆಂಗಳೂರು: ಸಿಸೋಡಿಯಾ ಬಂಧನ ಖಂಡಿಸಿ ಬಿಜೆಪಿ ಕಚೇರಿಯೆದುರು ಆಪ್ ಪ್ರತಿಭಟನೆ
ಮಾರ್ಚ್ 1ರ ಬುಧವಾರದಿಂದ ಎಲ್ಲಾ ಇಲಾಖೆಗಳ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗಬೇಕು. ಕೇಂದ್ರ ಸಂಘವು ನಿರ್ದಿಷ್ಟಪಡಿಸುವ ಮಾಹಿತಿಗಳನ್ನೊಳಗೊಂಡ ಪೋಸ್ಟರ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಚಾರಪಡಿಸಬೇಕು ಎಂದು ಸೂಚಿಸಿದೆ. ಅನಿರ್ದಿಷ್ಟಾವಧಿ ಮುಷ್ಕರವನ್ನು ಸಂಘಟನೆಗಳು ಅಧಿಕೃತ ಸೂಚನೆ ನೀಡುವವರೆಗೆ ಮುಂದುವರಿಸಬೇಕು. ಮುಷ್ಕರ ನಡೆಯುತ್ತಿರುವ ಸಂಧರ್ಭದಲ್ಲಿ ಯಾವುದೇ ರೀತಿಯ ಪ್ರತಿಭಟನೆ-ಉಪವಾಸ- ಧರಣಿ- ಸತ್ಯಾಗ್ರಹ-ಘೋಷಣೆಗಳನ್ನು ಕೂಗುವುದನ್ನು ನಿರ್ಬಂಧಿಸಲಾಗಿದೆ ಹಾಗೂ ಶಾಂತಿಯುತವಾಗಿ ಗೈರುಹಾಜರಾಗುವ ಮೂಲಕ ಹೋರಾಟ ಮಾಡಬೇಕು.
ತಾಲೂಕು/ಜಿಲ್ಲಾ ಮಟ್ಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ನೇತೃತ್ವದಲ್ಲಿ ಇಲಾಖಾವಾರು ತಂಡಗಳನ್ನು ರಚಿಸಿಕೊಂಡು ಮುಷ್ಕರ ನಡೆಯುತ್ತಿರುವ ಸಂದರ್ಭದಲ್ಲಿ ರಾಜ್ಯದ ಜಿಲ್ಲೆ ತಾಲೂಕು ವ್ಯಾಪ್ತಿಯ ಸರ್ಕಾರಿ ಕಛೇರಿ/ಶಾಲಾ/ಕಾಲೇಜು/ಆಸ್ಪತ್ರೆಗಳು ಸೇರಿದಂತೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ/ಸಿಬ್ಬಂದಿಗಳಿಗೆ ಮನವೊಲಿಸಿ ಸರ್ಕಾರಿ ಕರ್ತವ್ಯಕ್ಕೆ ಹಾಜರಾಗದಂತೆ ನೋಡಿಕೊಳ್ಳಬೇಕೆಂದು ಸೂಚಿಸಿದೆ.
ರಾಜ್ಯ ಸಂಘ ನಿರ್ದಿಷ್ಟಪಡಿಸಿರುವ ಮಾದರಿಯಲ್ಲಿ ಕರಪತ್ರ, ಇಮೇಜ್, ಪೋಸ್ಟರ್ ಮತ್ತು ಪ್ಲೆಕ್ಸ್ ಇತ್ಯಾದಿ ಮಾಡಿಸಿ ಪ್ರಚಾರ ಕೈಗೊಳ್ಳಬೇಕು. ಮುಷ್ಕರ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ/ಮಾಧ್ಯಮಗಳಲ್ಲಿ ಸರ್ಕಾರವನ್ನು ಟೀಕಿಸಬಾರದು ಹಾಗೂ ಯಾವುದೇ ಜನಪ್ರತಿನಿಧಿಗಳನ್ನು ಭಿನ್ನ ಹೇಳಿಕೆಗಳಿಂದ ಗೊಂದಲ ಉಂಟಾಗುವ ಸಾಧ್ಯತೆ ಇರುವುದರಿಂದ ಮುಷ್ಕರಕ್ಕೆ ಸಂಬಂಧಿಸಿದಂತೆ ಮುದ್ರಣ/ಎಲೆಕ್ಟ್ರಾನಿಕ್ ಮಾಧ್ಯಮಗಳ ಮುಂದೆ ಯಾವುದೇ ಹೇಳಿಕೆಗಳನ್ನು ನೀಡುವಂತಿಲ್ಲ ಎಂದು ಖಡಕ್ ಸೂಚನೆ ನೀಡಿದೆ.
ಮುಷ್ಕರದ ಸಂದರ್ಭದಲ್ಲಿ ಸರ್ಕಾರ ಮುಷ್ಕರವನ್ನು ಹತ್ತಿಕ್ಕಲು ಕಾನೂನು ಕ್ರಮಗಳ ಮೂಲಕ ಬೆದರಿಕೆ ಹಾಕಿದ್ದಲ್ಲಿ ಸರ್ಕಾರಿ ನೌಕರರು ಎದೆಗುಂದದೆ ಮುಷ್ಕರವನ್ನು ಯಶಸ್ವಿಗೊಳಿಸಬೇಕು. ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು (ಕ್ಯಾಶುವಾಲಿಟಿ, ಐಸಿಯು, ಎಂಐಸಿಯು-ಮಾತ್ರ) ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಬೇಕು. ಇನ್ನುಳಿದ ಎಲ್ಲಾ ಇಲಾಖೆಯ ಸರ್ಕಾರಿ ಅಧಿಕಾರಿ/ಸಿಬ್ಬಂದಿಗಳು ಮುಷ್ಕರದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ತಿಳಿಸಲಾಗಿದೆ.
ಇದನ್ನೂ ಓದಿ:ಎರಡು ಪ್ರಕರಣಗಳಲ್ಲಿ ಶಿಕ್ಷೆಯಾದಲ್ಲಿ ಒಂದೇ ಅವಧಿಯಲ್ಲಿ ಅನುಭವಿಸಬೇಕು: ಹೈಕೋರ್ಟ್