ಕರ್ನಾಟಕ

karnataka

ETV Bharat / state

ನಾಳೆಯಿಂದ ಸರ್ಕಾರಿ ನೌಕರರ ಮುಷ್ಕರ: ಏನಿರುತ್ತೆ? ಏನಿರಲ್ಲ? ಸಂಪೂರ್ಣ ಮಾಹಿತಿ - ಈಟಿವಿ ಭಾರತ ಕನ್ನಡ

ಸರ್ಕಾರಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ನಾಳೆಯಿಂದ ಆರಂಭವಾಗಲಿದೆ. ಜನಸಾಮಾನ್ಯರಿಗೆ ಮುಷ್ಕರದ ಬಿಸಿ ತಟ್ಟುವ ಸಾಧ್ಯತೆ ಇದೆ.

govt-employees-protest-from-tomorrow
ನಾಳೆಯಿಂದ ಸರ್ಕಾರಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರ : ಯಾವೆಲ್ಲಾ ಸರ್ಕಾರಿ ಸೇವೆಗಳು ಇರಲ್ಲ, ಇರಲಿವೆ?

By

Published : Feb 28, 2023, 9:26 PM IST

ನಾಳೆಯಿಂದ ಸರ್ಕಾರಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

ಬೆಂಗಳೂರು: ನಾಳೆಯಿಂದ ಸರ್ಕಾರಿ ನೌಕರರು ಏಳನೇ ಪರಿಷ್ಕೃತ ವೇತನ ಜಾರಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಕರ್ತವ್ಯಕ್ಕೆ ಗೈರಾಗಿ ಮುಷ್ಕರ ನಡೆಸಲಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಜೊತೆಗೆ ಇಂದು ಸರ್ಕಾರಿ ನೌಕರರ ಸಂಧಾನ ಸಭೆ ವಿಫಲವಾದ ಕಾರಣ ನೌಕರರು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಹೀಗಾಗಿ ನಾಳೆ ಬಹುತೇಕ ಸರ್ಕಾರಿ ಸೇವೆಗಳಲ್ಲಿ ವ್ಯತ್ಯಯವಾಗಲಿದೆ.

ಸರ್ಕಾರಿ ಕಚೇರಿಗಳು ಬಹುತೇಕ ಕಾರ್ಯಸ್ಥಗಿತವಾಗುವ ಸಾಧ್ಯತೆಯೂ ಇದೆ. ರಾಜ್ಯದ ಜನರಿಗೆ ಸರ್ಕಾರಿ ಸೇವೆಗಳು ಸಿಗುವುದು ಅನುಮಾನ. ಯಾಕೆಂದರೆ ಸುಮಾರು 10 ಲಕ್ಷ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರಾಗಿ ಆಕ್ರೋಶ ಹೊರಹಾಕಲಿದ್ದಾರೆ. ಸರ್ಕಾರದ ಯಾವುದೇ ಇಲಾಖೆಗಳು ನಾಳೆ ಕಾರ್ಯನಿರ್ವಹಿಸಲ್ಲ. ಸುಮಾರು 42 ಸರ್ಕಾರಿ ಇಲಾಖೆಗಳು ಬೆಂಬಲ ಸೂಚಿಸಿವೆ.

ಯಾವೆಲ್ಲ ಇಲಾಖೆಗಳ ಸೇವೆಯಲ್ಲಿ ವ್ಯತ್ಯಯ?:ವಿಧಾನಸೌಧದ ಎಲ್ಲಾ ಕಚೇರಿಗಳು, ಸಚಿವಾಲಯದ ಎಲ್ಲಾ ಕಚೇರಿಗಳು, ಬಿಬಿಎಂಪಿ, ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿ, ಗ್ರಾಮ ಪಂಚಾಯಿತಿ, ಸರ್ಕಾರಿ ಶಾಲೆಗಳು, ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಪುರಸಭೆ, ಸರ್ಕಾರಿ ಹಾಸ್ಟೆಲ್ ಗಳು, ತಾಲೂಕು ಕಚೇರಿ, ಜಿಲ್ಲಾ ಕಚೇರಿ,ಆರೋಗ್ಯ ಇಲಾಖೆ, ಕಂದಾಯ ಇಲಾಖೆಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಬಹುದು.

ಕಂದಾಯ ಇಲಾಖೆ ವ್ಯಾಪ್ತಿಯ ಖಾತೆ, ಪಹಣಿ, ತೆರಿಗೆ ಪಾವತಿ, ದೃಢೀಕರಣ ಪತ್ರ, ಜನನ, ಮರಣ ಪತ್ರ, ವಂಶವೃಕ್ಷ, ಸರ್ವೆಯರ್​ ಸಿಗುವುದು ಅನುಮಾನ. ಜಲಮಂಡಳಿ ಸೇವೆ, ಆರೋಗ್ಯ ಸೇವೆಗಳಲ್ಲೂ ವ್ಯತ್ಯಯ ಉಂಟಾಗಲಿದೆ. ಯಾವುದೇ ಓಪಿಡಿ ಸೇವೆಗಳೂ ಇರುವುದಿಲ್ಲ.

ಮುಷ್ಕರದಲ್ಲಿ ಸರ್ಕಾರಿ ವೈದ್ಯರು, ನರ್ಸ್‌ಗಳು, ಲ್ಯಾಬ್ ಟೆಕ್ನಿಷಿಯನ್ಸ್, ಶಿಕ್ಷಣ ಇಲಾಖೆ ನೌಕರರು ಭಾಗಿಯಾಗಲಿದ್ದಾರೆ. ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಮತ್ತು ಶಾಲೆಗೆ ವಿದ್ಯಾರ್ಥಿಗಳಿಗೆ ಶಿಕ್ಷಕರ ಕೊರತೆ ಉಂಟಾಗುವ ಸಾಧ್ಯತೆ ಇದೆ. ಎಲ್ಲ ಸರ್ಕಾರಿ ಶಿಕ್ಷಕರು ಮುಷ್ಕರದಲ್ಲಿ ಭಾಗಿಯಾಗುವ ಹಿನ್ನೆಲೆಯಲ್ಲಿ ಶಾಲೆಗೆ ಗೈರಾಗುವ ಸಾಧ್ಯತೆ ಹೆಚ್ಚಿದೆ.

ಯಾವ ಸೇವೆಯಲ್ಲಿ ವ್ಯತ್ಯಯ ಇಲ್ಲ: ಬಿಎಂಟಿಸಿ, ಕೆಎಸ್​​ಆರ್​ಟಿಸಿ ಬಂದ್​ಗೆ ಬಾಹ್ಯ ಬೆಂಬಲ ನೀಡಿದ್ದು, ಸಾರಿಗೆ ಸೇವೆಯಲ್ಲಿ ಹೆಚ್ಚಿನ ವ್ಯತ್ಯಯವಾಗುವುದಿಲ್ಲ. ತುರ್ತು ಸೇವೆಗಳು, ಅಪಘಾತ, ಡೆಲಿವರಿ, ಪೋಸ್ಟ್ ಮಾರ್ಟಮ್ ಸೇರಿದಂತೆ ಇತರೆ ತುರ್ತು ಸೇವೆಗಳು ಲಭ್ಯ ಇರಲಿವೆ. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇರಲಿದೆ. ಸ್ಮಶಾನ ಸೇರಿದಂತೆ ಕೆಲ ನೌಕರರು ಕಾರ್ಯ ಮಾಡಲಿದ್ದಾರೆ. ಪೌರ ಕಾರ್ಮಿಕರ ಸೇವೆಯೂ ಅಬಾಧಿತ.

ಇದನ್ನೂ ಓದಿ:'ಅಬಕಾರಿ ಇಲಾಖೆಯಲ್ಲಿ ಅಕ್ರಮ ನಡೆದಿಲ್ಲ, ಹತ್ತು ಆಡಿಯೋ ಬಿಡುಗಡೆ ಮಾಡಿದರೂ ಹೆದರಲ್ಲ'

ABOUT THE AUTHOR

...view details