ಬೆಂಗಳೂರು: ರಾಜ್ಯದ ವಿವಿಧೆಡೆ ಸರ್ಕಾರಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದರು. ಈ ಹಿನ್ನೆಲೆ ವಿವಿಧ ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳು ನೌಕರರಿಲ್ಲದೇ ಬಣಗುಟ್ಟಿದವು. ರಾಜ್ಯದ ಸರ್ಕಾರಿ ನೌಕರರು 7ನೇ ವೇತನ ಆಯೋಗ ಜಾರಿ ಹಾಗೂ ನೂತನ ಪಿಂಚಣಿ ಯೋಜನೆ ರದ್ದುಪಡಿಸುವಂತೆ ಒತ್ತಾಯಿಸಿ ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದರು. ಆದರೆ, ಸರ್ಕಾರ ನೌಕರರ ಬೇಡಿಕೆಗಳಿಗೆ ಒಪ್ಪಿದ್ದರಿಂದ ಅಪರಾಹ್ನ ಮುಷ್ಕರ ವಾಪಸ್ ಪಡೆದು, ನೌಕರರು ಕರ್ತವ್ಯಕ್ಕೆ ಹಾಜರಾಗುವಂತೆ ಮನವಿ ಮಾಡಲಾಗಿದೆ.
ಬೆಳಗ್ಗೆ ಮುಷ್ಕರಕ್ಕೆ ಕರೆ ನೀಡಿದ್ದ ಹಿನ್ನೆಲೆ ಬಿಬಿಎಂಪಿ ಕೇಂದ್ರ ಕಚೇರಿ ಅವರಣದಲ್ಲಿ ಸರ್ಕಾರಿ ನೌಕರರ ಸಂಘದ ಅನಿರ್ದಿಷ್ಟಾವಧಿ ಮುಷ್ಕರ ಬೆಂಬಲಿಸಿ ನಡೆದ ಪ್ರತಿಭಟನೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಸದಸ್ಯರು, ನೌಕರರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು.
ಪಾಲಿಕೆ ನೌಕರರ ಮುಷ್ಕರ, ಸಾಮಾನ್ಯ ಜನರ ಪರದಾಟ : ಇನ್ನು ಬಿಬಿಎಂಪಿ ಪಾಲಿಕೆ ನೌಕರರು ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. ಮುಷ್ಕರ ವಾಪಸ್ ಪಡೆಯುವ ಮುನ್ನ ವಿವಿಧ ಸೇವೆಗಳನ್ನು ಪಡೆಯಲು ಬಂದ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಜನನ ಮರಣ ಪ್ರಮಾಣ ಪತ್ರ ಮತ್ತು ಆಸ್ತಿ ಸಂಬಂಧ ಪಟ್ಟ ಮಾಹಿತಿ ಪಡೆಯಲು ಸಾರ್ವಜನಿಕರು ಸೇವೆ ದೊರೆಯದ ವಾಪಸ್ ಮರಳುವ ದೃಶ್ಯಗಳು ಕಂಡು ಬಂತು.
ಈ ವೇಳೆ, ಸಂಘದ ಅಧ್ಯಕ್ಷ ಎ. ಅಮೃತ್ ರಾಜ್ ಮಾತನಾಡಿ, ಬೆಂಗಳೂರು ನಗರ ಪ್ರದೇಶದಲ್ಲಿ ವಾಸ ಮಾಡುವವರ ಪ್ರತಿ ತಿಂಗಳು ಖರ್ಚು ವೆಚ್ಚ ಹೆಚ್ಚಾಗಿದೆ. ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ವೇತನ ಮಾತ್ರ ಹೆಚ್ಚಳವಾಗಿಲ್ಲ. ಕೊರೋನ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ನಾವು ಕಾರ್ಯ ನಿರ್ವಹಿಸಿದ್ದೆವು. ಈ ವೇಳೆ, 30ಕ್ಕೂ ಹೆಚ್ಚು ನೌಕರರು ಕೋವಿಡ್ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ. ಸಂಧ್ಯಾಕಾಲದಲ್ಲಿ ಹಿರಿಯ ಜೀವಗಳಿಗೆ ಹಳೆಯ ಪಿಂಚಣಿ ಯೋಜನೆ ಜಾರಿ ಮಾಡಿದರೆ ವಿಶ್ರಾಂತ ಜೀವನವನ್ನು ಸುಖವಾಗಿ ಕಳೆಯುತ್ತಾರೆ ಎಂದು ತಿಳಿಸಿದರು.
ನಾವು ವೇತನ ಹೆಚ್ಚಳ ಮತ್ತು ಓಪಿಎಸ್ ಯೋಜನೆ ಜಾರಿ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇವೆ. ಈ ಮೂಲಕ ನೌಕರರ ಜೀವ ಉಳಿಸಿ ಎಂದು ಹೇಳಿದರು. ಇನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನೌಕರರ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡಿದ್ದಾರೆ. ನಮ್ಮ ಬೇಡಿಕೆಗಳು ಈಡೇರಿಸುವ ಭರವಸೆ ಇದೆ ಎಂದು ಇದೇ ವೇಳೆ ಹೇಳಿದ್ದರು. ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳಾದ ಎಸ್.ಜಿ.ಸುರೇಶ್, ಕೆ.ಜಿ.ರವಿ, ರಾಮಚಂದ್ರ, ಸಾಯಿಶಂಕರ್, ರುದ್ರೇಶ್, ಸಂತೋಷ್ ಕುಮಾರ್ ನಾಯ್ಕ, ಜಿ.ಮಂಜುನಾಥ್, ನಂಜಪ್ಪ, ಕೆ.ಮಂಜೇಗೌಡ, ಬಾಬಣ್ಣ, ಮಂಜು, ಸೂರ್ಯಕುಮಾರಿ, ರೇಣುಕಾಂಬ, ಸಂಧ್ಯಾ ಮತ್ತು ಸಾವಿರಾರು ನೌಕರರು ಪಾಲ್ಗೊಂಡಿದ್ದರು.
ಆಪ್ ಕಾರ್ಯಕರ್ತರ ಪ್ರತಿಭಟನೆ: ಇನ್ನು ದೇವನಹಳ್ಳಿಯ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಶಾಸಕರಿಗಾಗಿ ಅಧಿಕಾರಿಗಳು ಕೆಲಸ ಮಾಡಿರುವ ಆರೋಪದ ಹಿನ್ನಲೆ ಆಪ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ದೇವನಹಳ್ಳಿ ತಾಲೂಕು ಕಚೇರಿಯ ಹೊರ ಬಾಗಿಲಿಗೆ ಬೀಗ ಹಾಕಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಒಳಗಡೆ ಅಧಿಕಾರಿಗಳೊಂದಿಗೆ ಕೆಲಸ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಹಿನ್ನೆಲೆ ಆಪ್ ಕಾರ್ಯಕರ್ತರು ಶಾಸಕರನ್ನು ಕಚೇರಿಯಿಂದ ಹೊರ ಬರಲು ಬಿಡದೇ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪೊಲೀಸ್ ಬಿಗಿ ಬಂದೋಬಸ್ತ್ನಲ್ಲಿ ಶಾಸಕರನ್ನು ಕಚೇರಿಯಿಂದ ಹೊರತರಲಾಯಿತು. ರಿಯಲ್ ಎಸ್ಟೇಟ್ ಕೆಲಸ ಮಾಡಿಸಿಕೊಳ್ಳಲು ಮುಷ್ಕರದ ನಡುವೆಯೂ ಶಾಸಕರು ಬಂದಿದ್ದಾರೆ ಎಂದು ಆಪ್ ಮುಖಂಡ ಬಿಕೆ ಶಿವಪ್ಪ ಆರೋಪ ಮಾಡಿದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ನಿಸರ್ಗ ನಾರಾಯಣಸ್ವಾಮಿ, ಇಂದು ಮುಷ್ಕರದ ಹಿನ್ನೆಲೆ ಕಚೇರಿಗೆ ಯಾರೋ ಕೆಲಸಕ್ಕಾಗಿ ಬಂದಿದ್ದರು. ಅಧಿಕಾರಿಗಳಿಗೆ ಕೆಲಸ ಮಾಡಲು ಹೇಳಲು ನಾನು ಹೋಗಿದ್ದೆ. ಆದ್ರೆ ಸುಖ ಸುಮ್ಮನೆ ಗದ್ದಲ ಎಬ್ಬಿಸಿ ರಾಜಕೀಯವಾಗಿ ಡ್ರಾಮಾ ಮಾಡಿದ್ದಾರೆ ಎಂದು ಶಾಸಕರು ಆರೋಪಿಸಿದ್ದಾರೆ.
ಶಿವಮೊಗ್ಗ, ಬಳ್ಳಾರಿ, ಹಾವೇರಿಯಲ್ಲೂ ಮುಷ್ಕರ: ಶಿವಮೊಗ್ಗದಲ್ಲೂ ಸರ್ಕಾರಿ ನೌಕರರು ಮುಷ್ಕರಕ್ಕೆ ಬೆಂಬಲ ವ್ಯಕ್ತವಾಗಿದ್ದು, ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ, ಉಪ ವಿಭಾಗಾಧಿಕಾರಿಗಳ ಕಚೇರಿ, ತಹಶೀಲ್ದಾರ್ ಕಚೇರಿ ಸೇರಿದಂತೆ ಎಲ್ಲ ಕಚೇರಿಗಳು ಖಾಲಿ ಖಾಲಿಯಾಗಿವೆ. ಆದರೆ, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದಂತೆ ತಾಲೂಕು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಬಂದ್ ಆಗಿವೆ. ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಆಗಮಿಸಿ ವಾಪಸ್ ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.