ಕರ್ನಾಟಕ

karnataka

ETV Bharat / state

ಎನ್​​ಪಿಎಸ್ ರದ್ದು ಕೋರಿ ನೌಕರರ ಸಂಘದಿಂದ ಸಿಎಂಗೆ ಮನವಿ: ಸಂಪುಟ ಸಭೆಯಲ್ಲಿ ಚರ್ಚಿಸಿ ಕ್ರಮದ ಭರವಸೆ - ಸಂಪುಟ ಸಭೆ

ಸಿಎಂ ಸಿದ್ದರಾಮಯ್ಯ ಅವರನ್ನು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಭೇಟಿಯಾಗಿ ಎನ್​ಪಿಎಸ್​ ರದ್ದು ಮಾಡುವಂತೆ ಮನವಿ ಮಾಡಿದರು. ಈ ಕುರಿತು ಚರ್ಚಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ.

ಸಿಎಂಗೆ ಮನವಿ
ಸಿಎಂಗೆ ಮನವಿ

By ETV Bharat Karnataka Team

Published : Jan 6, 2024, 9:42 PM IST

ಬೆಂಗಳೂರು:ಎನ್​​ಪಿಎಸ್ ರದ್ದು ಕೋರಿ ಸಿಎಂ‌ ಸಿದ್ದರಾಮಯ್ಯ ಅವರಿಗೆ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿದರು. ಈ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಬಳಿಕ ನಿಮ್ಮ ಬಳಿ ಸಮಾಲೋಚನೆ ನಡೆಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಶನಿವಾರ ಕರ್ನಾಟಕ ರಾಜ್ಯ ಸರ್ಕಾರಿ ಎನ್​​ಪಿಎಸ್ ನೌಕರರ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಎನ್​​ಪಿಎಸ್ ರದ್ದತಿ ಬಗ್ಗೆ ಚರ್ಚಿಸಿದರು. ಮುಖ್ಯಮಂತ್ರಿಗಳ ಹಾಗೂ ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಡಾ. ತ್ರಿಲೋಕ್ ಚಂದ್ರ, ಎನ್​​ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತಾರಾಂ ತೇಜ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ ನಾಗೇಶ್ ಹಾಗೂ ವಿವಿಧ ಸರ್ಕಾರಿ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಎನ್​​ಪಿಎಸ್ ರದ್ದತಿಯ ಸಾಧ್ಯಾಸಾಧ್ಯತೆಗಳ ಕುರಿತು ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು. ಇದನ್ನು ರದ್ದುಪಡಿಸಿದ ಇತರ ರಾಜ್ಯಗಳಲ್ಲಿ ಅನುಸರಿಸಿರುವ ಕ್ರಮಗಳ ಕುರಿತೂ ಸಹ ಪರಿಶೀಲಿಸಲಾಗುವುದು. ಆರ್ಥಿಕ ಇಲಾಖೆ ಕೂಡ ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಲಿದೆ ಎಂದು ಭರವಸೆ ನೀಡಿದರು.

ಸಭೆ ವೇಳೆ ಸರ್ಕಾರಿ‌ ನೌಕರರ ನಿಯೋಗ ಆದಷ್ಟು ಬೇಗ ಹೊಸ ಪಿಂಚಣಿ ಪದ್ಧತಿಯನ್ನು ರದ್ದುಗೊಳಿಸಿ, ಹಳೆ ಪಿಂಚಣಿ ಪದ್ಧತಿ ಮರು ಜಾರಿಗೊಳಿಸಲು ಮನವಿ ಮಾಡಿದರು. ಆಗ ಸಿಎಂ ಸಿದ್ದರಾಮಯ್ಯ ಅವರು 'ಈ ಸಂಬಂಧ ಮುಂದಿನ ಬಜೆಟ್​​ನಲ್ಲಿ ಒಪಿಎಸ್ ಜಾರಿ ಸಂಬಂಧ ಘೋಷಣೆ ಅಸಾಧ್ಯ. ಡಿಸಿಎಂ ಜೊತೆ ಸಮಾಲೋಚಿಸಿ, ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸುತ್ತೇವೆ. ಬಳಿಕ ನಿಮ್ಮ ಬಳಿ ಸಮಾಲೋಚನೆ ನಡೆಸುತ್ತೇವೆ. ಒಪಿಎಸ್ ಮರುಜಾರಿ ಸಂಬಂಧ ಕ್ರಮ ಕೈಗೊಳ್ಳಲಾಗುವುದು' ಎಂದು ಭರವಸೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ರಾಜ್ಯದಲ್ಲಿ ಹೊಸ ಪಿಂಚಣಿ ಪದ್ದತಿ ರದ್ದುಗೊಳಿಸಿ, ಹಳೆ ಪಿಂಚಣಿ ಪದ್ಧತಿ ಮರು ಜಾರಿಗೊಳಿಸುವ ಬಗ್ಗೆ ಭರವಸೆ ನೀಡಿತ್ತು. ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಏಳು ತಿಂಗಳು ಆಗಿದ್ದು, ಸರ್ಕಾರಿ ನೌಕರರು ಹೊಸ ಪಿಂಚಣಿ ಪದ್ಧತಿ ರದ್ದತಿಗೆ ಒತ್ತಾಯಿಸುತ್ತಿದ್ದಾರೆ.

ಹೊಸ ಪಿಂಚಣೆ ವ್ಯವಸ್ಥೆಯನ್ನು ರದ್ದುಗೊಳಿಸಿದ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಮರು ಜಾರಿ ಮಾಡುವಂತೆ ಸರ್ಕಾರಿ ನೌಕರರು ಆಗ್ರಹಿಸುತ್ತಲೇ ಇದ್ದಾರೆ. ಹಲವು ಬಾರಿ ಪ್ರತಿಭಟನೆಗಳನ್ನು ಕೂಡ ಮಾಡಿ ಸರ್ಕಾರದ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ಪಿತ್ರಾರ್ಜಿತ ಆಸ್ತಿಯಲ್ಲಿ ಮೃತ ಹೆಣ್ಣು ಮಕ್ಕಳಿಗೂ ಸಮಾನ ಪಾಲಿದೆ: ಹೈಕೋರ್ಟ್ ಮಹತ್ವದ ತೀರ್ಪು

ABOUT THE AUTHOR

...view details