ಕರ್ನಾಟಕ

karnataka

ETV Bharat / state

ಸಿಎಜಿಗೆ ವಿವರ ನೀಡದ ಅಧಿಕಾರಿಗಳು: ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿಯಲ್ಲಿ ಬಹಿರಂಗ

ಸರ್ಕಾರಿ ಇಲಾಖೆಗಳ ಹೆಚ್ಚುವರಿ ಅನುದಾನ ಕುರಿತು ಅಧಿಕಾರಿಗಳು ಸಿಎಜಿಗೆ ವರದಿ ನೀಡದ ವಿಚಾರ ಬೆಳಕಿಗೆ ಬಂದಿದೆ.

govt-dept-officials-not-provided-infromation-to-cag-says-public-accounts-committee-report
ಸಿಎಜಿಗೆ ವಿವರ ನೀಡದ ಅಧಿಕಾರಿಗಳು : ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿಯಲ್ಲಿ ಬಹಿರಂಗ

By

Published : Feb 21, 2023, 3:19 PM IST

ಬೆಂಗಳೂರು: ಸರ್ಕಾರದ ಹಲವು ಇಲಾಖೆಗಳು ಕಳೆದ ಹತ್ತು ವರ್ಷಗಳಲ್ಲಿ ತಮ್ಮ ಹೆಚ್ಚುವರಿ ಅನುದಾನದ ಕುರಿತ ವಿವರಗಳನ್ನು ಮಹಾಲೇಖಪಾಲರಿಗೆ (ಸಿಎಜಿ) ಸಲ್ಲಿಸದೇ ಇರುವ ಬಗ್ಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಉಲ್ಲೇಖಿಸಿದೆ. ಶಾಸಕ ಕೃಷ್ಣ ಬೈರೇಗೌಡ ಅಧ್ಯಕ್ಷತೆಯ ಸಮಿತಿ ತನ್ನ ವರದಿಯನ್ನು ಇಂದು ವಿಧಾನಸಭೆಯಲ್ಲಿ ಮಂಡಿಸಿತು. ಇದು ಪ್ರಸಕ್ತ ವಿಧಾನಸಭೆಯ ಹತ್ತನೇ ಲೆಕ್ಕಪತ್ರ ಸಮಿತಿ ವರದಿ. ಆರ್ಥಿಕ ಇಲಾಖೆಗೆ ಸಂಬಂಧಿಸಿದ ಭಾರತೀಯ ಲೆಕ್ಕಪರಿಶೋಧಕರ ವರದಿಯ ಕುರಿತು ಇದು ಅಧ್ಯಯನ ಮಾಡಿದೆ.

ಸರ್ಕಾರದಿಂದ ವಿವಿಧ ಇಲಾಖೆಗಳಿಗೆ ಬಿಡುಗಡೆಯಾದ ಅನುದಾನಗಳ ಬಗ್ಗೆ ಆರ್ಥಿಕ ಇಲಾಖೆಯು ಸರಿಯಾದ ಮೇಲ್ವಿಚಾರಣೆ ನಡೆಸಬೇಕು. ಈ ರೀತಿಯ ಮೇಲ್ವಿಚಾರಣೆ ನಡೆಸುವ ಹೊಣೆಯನ್ನು ಆರ್ಥಿಕ ಇಲಾಖೆಯ ಉನ್ನತಾಧಿಕಾರಿಗಳಿಗೆ ವಹಿಸಬೇಕು ಎಂದು ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ. ಸರ್ಕಾರದ ಅನುದಾನಗಳ ಬಗ್ಗೆ ಭಾರತೀಯ ಮಹಾಲೇಖಪಾಲರ ಕಚೇರಿಗೆ ಒದಗಿಸದೇ ಇದ್ದರೆ ಸಿಎಜಿ ವರದಿಗಳನ್ನು ಸಿದ್ಧಪಡಿಸಲು ತೊಂದರೆಯಾಗುತ್ತದೆ. ಅಷ್ಟೇ ಅಲ್ಲ, ಸಿಎಜಿ ವರದಿ ಗುರುತಿಸಿರುವುದನ್ನು ಉಸ್ತುವಾರಿ ಮಾಡಿ ಸದನಕ್ಕೆ ವರದಿ ನೀಡುವುದು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಕಷ್ಟವಾಗುತ್ತದೆ ಎಂಬ ತಾತ್ಪರ್ಯ ಕೃಷ್ಣ ಬೈರೇಗೌಡ ಸಮಿತಿಯಿಂದ ಹೊರಹೊಮ್ಮಿದೆ.

2019ರಿಂದ 2020ರ ಅವಧಿಯಲ್ಲಿ 1,959 ಬಿಲ್​ಗಳಿಗೆ ಸಂಬಂಧಿಸಿದ 96.08 ಕೋಟಿ ರೂ ಮೊತ್ತದ ಲೆಕ್ಕ ಸಲ್ಲಿಸಲಿಲ್ಲ. ಇವುಗಳನ್ನು ಸಂಬಂಧಿಸಿದವರಿಗೆ ಕೊಡುವ ಮೂಲಕ ಅಧಿಕೃತ ತೀರುವಳಿಯನ್ನು ಮಾಡಿಲ್ಲ. ಇದರಿಂದ ಸರ್ಕಾರದ ಮೊತ್ತ ದುರ್ಬಳಕೆಯಾಗುವ ಸಂಭವ ಇದೆ. ಆದ್ದರಿಂದ ಇವುಗಳ ತೀರುವಳಿಗೆ ಸಂಬಂಧಪಟ್ಟ ಅಧಿಕಾರಿಗಳು ಮೊದಲ ಆದ್ಯತೆ ನೀಡಬೇಕು ಎಂದು ಸಮಿತಿಯು ಸರ್ಕಾರಕ್ಕೆ ಸಲಹೆ ನೀಡಿದೆ. ಮುಂಗಡ ಪತ್ರದಲ್ಲಿ ನೀಡಲಾಗಿರುವ ಅನುದಾನಗಳನ್ನು ಗರಿಷ್ಠ ಮಟ್ಟದಲ್ಲಿ ಬಳಸಲು ಅಗತ್ಯವಾದ ಕ್ರಮಗಳನ್ನು ಇಲಾಖಾ ಮುಖ್ಯಸ್ಥರುಗಳು ತೆಗೆದುಕೊಳ್ಳಬೇಕು ಎಂದು ಸಮಿತಿ ಸಲಹೆ ನೀಡಿದೆ. ಬೆಳೆಯುತ್ತಿರುವ ತಂತ್ರಜ್ಞಾನ ಬಳಸಿಕೊಂಡು ಮುಂಗಡ ಪತ್ರದಲ್ಲಿನ ಘೋಷಣೆಗಳ ನಿರ್ವಹಣೆಯಾಗುವಂತೆ ಸಂಬಂಧಿಸಿದ ಇಲಾಖಾ ಮುಖ್ಯಸ್ಥರು ನೋಡಿಕೊಳ್ಳಬೇಕು. ಹೆಚ್ಚುವರಿ ಅನುದಾನಗಳು, ಉಳಿತಾಯ ಇತ್ಯಾದಿ ವಿಷಯಗಳಲ್ಲಿ ವೈಫಲ್ಯಗಳಾಗದಂತೆ ಎಚ್ಚರ ವಹಿಸಬೇಕು ಎಂದು ಹೇಳಿದೆ.

2011 ರಿಂದ 2020ರವರೆಗಿನ ಅವಧಿಯ ಎಲ್ಲ ಸಿಎಜಿ ವರದಿಗಳ ಬಗ್ಗೆ ಸಮಿತಿ ವ್ಯಾಪಕ ಚರ್ಚೆ ನಡೆಸಿತು. ಈ ವರದಿಗಳಲ್ಲಿ ಗುರುತಿಸಿದ ಲೋಪಗಳು ಮರುಕಳಿಸದಂತೆ ಇಲಾಖೆಗಳ ಮಟ್ಟದಲ್ಲಿ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಲೆಕ್ಕಪತ್ರ ಸಮಿತಿ ಸೂಚಿಸಿದೆ. ಸರ್ಕಾರದ ಉದ್ದೇಶಗಳ ಯೋಜನೆಗಳು ಹಾಗೂ ಇವುಗಳಿಗಾಗಿ ಬಿಡುಗಡೆ ಮಾಡಲಾದ ಅನುದಾನಗಳನ್ನು ಅನೇಕ ಇಲಾಖೆಗಳು ನಿರ್ಲಕ್ಷ್ಯ ಮಾಡುತ್ತಿವೆ ಎಂಬುದು ವರದಿಯಲ್ಲಿ ಉಲ್ಲೇಖವಾಗಿದೆ. ಸಿಎಜಿ ವರದಿಗಳು ಇದರ ಬಗ್ಗೆ ಗಮನಸೆಳೆದಿದ್ದು, ಆದ್ಯತೆ ಮೇಲೆ ಸರಿಪಡಿಸಿಕೊಳ್ಳಬೇಕು ಎಂದು ಹೇಳಿದೆ. ಕಳೆದ ಹತ್ತು ವರ್ಷಗಳಲ್ಲಿ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕಕ್ಕೆ ಬಿಡುಗಡೆಯಾಗಿರುವ ಕೇಂದ್ರದ ಅನುದಾನ ಮೊತ್ತ ಕಡಿಮೆ ಎಂದು ವರದಿ ಗುರುತಿಸಿದೆ. ರಾಜ್ಯದ ವಿವಿಧ ಬಾಬ್ತುಗಳಿಗೆ ಕೇಂದ್ರ ಸರ್ಕಾರ ನೀಡಬೇಕಾಗಿದ್ದಷ್ಟು ಹಣ ಬಂದಿಲ್ಲ ಎಂದು ವರದಿಯಲ್ಲಿ ಸಮಿತಿ ತಿಳಿಸಿದೆ.

ಇದನ್ನೂ ಓದಿ:ಭೂಸ್ವಾಧೀನ ಪರಿಹಾರ ಅಕ್ರಮ ಆರೋಪ: ನಿರಾಣಿ-ಮರಿತಿಬ್ಬೇಗೌಡ ನಡುವೆ ಜಟಾಪಟಿ

ABOUT THE AUTHOR

...view details