ಬೆಂಗಳೂರು:ನಗರ ಭಾಗಗಳಲ್ಲಿ ಅಗ್ನಿ ದುರಂತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 329 ಕೋಟಿ ರೂ. ವೆಚ್ಚದಲ್ಲಿ 17 ನೂತನ ಅಗ್ನಿಶಾಮಕ ಠಾಣೆ ನಿರ್ಮಾಣ ಹಾಗೂ ವಿವಿಧ ಠಾಣೆಗಳ ಉನ್ನತೀಕರಣಕ್ಕೆ ನಿರ್ಧರಿಸಿದ್ದು, ಫೆಬ್ರವರಿ ಅಂತ್ಯದ ವೇಳೆಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಕಾಸಸೌಧದಲ್ಲಿ ಸೋಮವಾರ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ಬೇಸಿಗೆಯಲ್ಲಿ ಅಗ್ನಿ ದುರಂತಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಹಿಸಬೇಕು. ಈ ನಿಟ್ಟಿನಲ್ಲಿ ಅಗ್ನಿ ಶಾಮಕದಳವನ್ನು ಉನ್ನತೀಕರಣಗೊಳಿಸಬೇಕು. ಆಧುನಿಕ ಉಪಕರಣಗಳನ್ನು ಖರೀದಿ ಮತ್ತು ಅಗತ್ಯವಿರುವ ಠಾಣೆಗಳಿಗೆ ಹೆಚ್ಚುವರಿಯಾಗಿ ನೂತನ ವಾಹನಗಳನ್ನು ಖರೀದಿಸಬೇಕು. ಈ ಕೆಲಸಗಳನ್ನು ಫೆಬ್ರವರಿ ಅಂತ್ಯದೊಳಗೆ ಮುಗಿಸಲು ಪ್ರತ್ಯೇಕ ಟೆಂಡರ್ ಕರೆದು ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರವು 15ನೇ ಹಣಕಾಸು ಆಯೋಗದ ಅನ್ವಯ ರಾಜ್ಯದ ಅಗ್ನಿಶಾಮಕ ದಳಕ್ಕೆ 2022-23 ರ ಸಾಲಿನಲ್ಲಿ 329 ಕೋಟಿ ರೂ. ಹಣ ಮಂಜೂರಾಗಿದೆ. ಈ ಹಣದ ಬಳಕೆಗೆ ಸಂಬಂಧಿಸಿದಂತೆ ಅಗ್ನಿ ಶಾಮಕದಳ ಪೊಲೀಸ್ ಮಹಾ ನಿರ್ದೇಶಕ ಕಮಲ್ ಪಂತ್ ಅವರು ಕ್ರಿಯಾ ಯೋಜನೆ ಮಂಡಿಸಿದರು.
329 ಕೋಟಿ ರೂ. ಹಣದ ಪೈಕಿ ನೂತನ ಅಗ್ನಿಶಾಮಕ ಠಾಣೆಗಳ ನಿರ್ಮಾಣಕ್ಕೆ 98.97 ಕೋಟಿ ರೂ., ರಾಜ್ಯ ತರಬೇತಿ ಕೇಂದ್ರದ ಉನ್ನತೀಕರಣಕ್ಕೆ 16.49 ಕೋಟಿ ರೂ., ಆಧುನಿಕ ಉಪಕರಣಗಳ ಖರೀದಿಗೆ 148.45 ಕೋಟಿ ರೂ., ನಗರ ಪ್ರದೇಶಗಳಲ್ಲಿ ಅಗ್ನಿಶಾಮಕ ದಳ ಬಲಪಡಿಸಲು 16.50 ಕೋಟಿ ರೂ. ಬಳಸಲು ನಿರ್ಧರಿಸಲಾಗಿದೆ.