ಬೆಂಗಳೂರು: ಬಿಜೆಪಿ ಸರ್ಕಾರದ ವೇಳೆ ತಿದ್ದುಪಡಿಯಾಗಿದ್ದ ಎಪಿಎಂಸಿ ಕಾಯ್ದೆಯನ್ನು ನಾವು ವಾಪಸ್ ಪಡೆಯಲಿದ್ದು, ತಿದ್ದುಪಡಿಗೂ ಮೊದಲು ಹೇಗಿತ್ತೋ ಆ ರೀತಿ ಮತ್ತೆ ಕಾಯ್ದೆಯನ್ನು ಮರುತಿದ್ದುಪಡಿ ಮಾಡುತ್ತೇವೆ ಎಂದು ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ್ ಸ್ಪಷ್ಟಪಡಿಸಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕೃಷಿ ಮಾರುಕಟ್ಟೆಯಲ್ಲಿ ರೈತರ ಉತ್ಪನ್ನದಲ್ಲಿ ರೈತರಿಗೆ ಮೋಸ ಆಗುತ್ತಿದೆ. ಕಾಯ್ದೆ ತಿದ್ದುಪಡಿಯಿಂದ ಆರ್ಥಿಕತೆ ಕುಸಿತವಾಗಿದೆ. ಆದಾಯ 700 ಕೋಟಿಯಿಂದ 100 ಕೋಟಿಗೆ ಇಳಿದಿದೆ ಎಂದು ಜೆಡಿಎಸ್ ಸದಸ್ಯ ಟಿ.ಎ ಶರವಣ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ವಿಷಯದ ಬಗ್ಗೆ ಎಪಿಎಂಸಿ ಕಾಯ್ದೆ ತಿದ್ದುಪಡಿ ಕಾಯ್ದೆ ಕೆಳಮನೆಯಲ್ಲಿ ಬಂದಿದೆ. ಅಲ್ಲಿ ವಿಸ್ತೃತವಾಗಿ ಚರ್ಚೆ ಆಗಲಿದೆ. ಕೇಂದ್ರ ಸರ್ಕಾರದಿಂದ ಈ ಕಾಯ್ದೆಯನ್ನು ವಾಪಸ್ ಪಡೆಯಲಾಗಿದೆ. ಹಿಂದಿನ ರಾಜ್ಯ ಸರ್ಕಾರ ವಾಪಸ್ ಪಡೆಯಬೇಕಾಗಿತ್ತು. ಆದರೆ ಪಡೆದಿಲ್ಲ. ನಾವು ಈಗ ಅದನ್ನ ವಾಪಸ್ ಪಡೆಯುತ್ತಿದ್ದೇವೆ ಎಂದರು.
ದರ ಕಡಿತ ಮಾಡಿದರೆ ವಿದ್ಯುತ್ ಖರೀದಿ: ಪವನ ವಿದ್ಯುತ್ ಉತ್ಪಾದನ ಘಟಕಗಳು ಪ್ರತಿ ಯೂನಿಟ್ ವಿದ್ಯುತ್ನ್ನು 3 ರೂ.ಗೆ ನೀಡುತ್ತಿವೆ. ಆದರೆ ಸಕ್ಕರೆ ಕಾರ್ಖಾನೆಗಳು 6 ರೂ.ನಿಗದಿಪಡಿಸಿವೆ. ಹಾಗಾಗಿ ಸರ್ಕಾರ ಸಕ್ಕರೆ ಕಾರ್ಖಾನೆಗಳಿಂದ ಉತ್ಪತ್ತಿಯಾಗುವ ವಿದ್ಯುತ್ ಖರೀದಿ ಮಾಡುತ್ತಿಲ್ಲ. ದರ ಕಡಿಮೆ ಮಾಡಿದರೆ ಖರೀದಿಗೆ ಮುಂದಾಗುತ್ತೇವೆ ಎಂದು ಸಚಿವ ಶಿವಾನಂದ ಪಾಟೀಲ್ ಇದೇ ವೇಳೆ ಸ್ಪಷ್ಟಪಡಿಸಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಹನುಮಂತ ನಿರಾಣಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಕ್ಕರೆ ಕಾರ್ಖಾನೆಯ ವಿದ್ಯುತ್ ಸರ್ಕಾರ ಖರೀದಿ ಮಾಡಬೇಕೆಂಬ ಪ್ರಶ್ನೆ ಹಾಕಿದ್ದಾರೆ. ಆದರೆ ಸಕ್ಕರೆ ಕಾರ್ಖಾನೆಯವರು ಪ್ರತಿ ಯೂನಿಟ್ಗೆ 6 ರೂ. ಕೇಳುತ್ತಿದ್ದಾರೆ. ವಿಂಡ್ ಮಿಲ್ನವರು 3 ರೂ.ಗೆ ಕೊಡುತ್ತಿದ್ದಾರೆ. ಹೀಗಾಗಿ ಸಕ್ಕರೆ ಕಾರ್ಖಾನೆಯ ವಿದ್ಯುತ್ ದರ ಹೆಚ್ಚಿದೆ. ದರ ಕಡಿಮೆ ಮಾಡಿದರೆ ಖರೀದಿ ಮಾಡಬಹುದು. ಆ ನಿಟ್ಟಿನಲ್ಲಿ ಅವರು ತೀರ್ಮಾನ ಮಾಡಲಿ ಎಂದರು.
ಶಿವಮೊಗ್ಗ ಏರ್ಪೋರ್ಟ್ ಕಾಮಗಾರಿ ಅಕ್ರಮ ಆರೋಪ:ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ದರ ಪರಿಷ್ಕರಣೆ ಮಾಡಿದ್ದು, ಇದರ ಬಗ್ಗೆ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದುಕೊಂಡು ಪರಿಶೀಲನೆ ನಡೆಸಲಾಗುತ್ತದೆ. ಸದಸ್ಯರಿಗೆ ಇದರಿಂದ ತೃಪ್ತಿಯಾಗದೇ ಇದ್ದಲ್ಲಿ ಅವ್ಯವಹಾರ ಆರೋಪದ ಕುರಿತು ಸರ್ಕಾರ ತನಿಖೆಗೆ ಆದೇಶ ನೀಡಲಿದೆ ಎಂದು ಸಚಿವ ಎಂ ಬಿ ಪಾಟೀಲ್ ಸ್ಪಷ್ಟಪಡಿಸಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದ ಹೊಸ ರನ್ ವೇಗೆ ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ರನ್ ವೇ ನಿರ್ಮಾಣದಲ್ಲಿ ದೊಡ್ಡ ಅಕ್ರಮ ಆಗಿದೆ. ಈ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಸದಸ್ಯ ಮಂಜುನಾಥ್ ಭಂಡಾರಿ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಸಚಿವ ಎಂ ಬಿ ಪಾಟೀಲ್, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಪ್ರಾರಂಭಿಕ ಅಂದಾಜು ಮೊತ್ತ 220 ಕೋಟಿ ಇತ್ತು. ಎರಡು ಬಾರಿ ಇದು ಪರಿಷ್ಕರಣೆ ಆಗಿದೆ. ಪರಿಷ್ಕೃತ ಅಂದಾಜು ಮೊತ್ತ 449.22 ಕೋಟಿಗೆ ಅನುಮೋದನೆ ನೀಡಲಾಗಿದೆ. ಹಳೆ ಮತ್ತು ಹೊಸ ರನ್ ವೇಗೆ 247.98 ಕೋಟಿ ವೆಚ್ಚ ಮಾಡಲಾಗಿದೆ. ಬಾಕಿ ಸುಮಾರು 21.85 ಕೋಟಿ ಮಾತ್ರ ಪಾವತಿ ಬಾಕಿ ಇದೆ. ಅಕ್ರಮದ ಬಗ್ಗೆ ಆರೋಪ ಮಾಡಿದ್ದಾರೆ. ಇಲಾಖೆ ಅಧಿಕಾರಿಗಳಿಂದ ಮಾಹಿತಿ ತರಿಸಿ ಮುಂದಿನ ತೀರ್ಮಾನ ಮಾಡುತ್ತೇವೆ ಎಂದರು.
ಶಿವಮೊಗ್ಗದಲ್ಲಿ ನೈಟ್ ಲ್ಯಾಂಡಿಂಗ್ ವ್ಯವಸ್ಥೆಗೆ ಹಣ ಹೆಚ್ಚಾಗಿದೆ. ಕಟ್ಟಡ ಛಾವಣಿ ಕಮಲದ ಆಕಾರ ಮಾಡಿದ್ದಾರೆ. ಹೀಗಾಗಿ ವೆಚ್ಚ ಹೆಚ್ಚು ಮಾಡಿಕೊಂಡು ಹೋಗಿದ್ದಾರೆ. ಮತ್ತೊಮ್ಮೆ ಪರಿಶೀಲನೆ ನಡೆಸುತ್ತೇವೆ. ನಮ್ಮ ಅಧಿಕಾರಿಗಳು ನೀಡುವ ಮಾಹಿತಿ ಸದಸ್ಯರಿಗೆ ತೃಪ್ತಿ ತರದಿದ್ದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ತನಿಖೆಗೆ ವಹಿಸುವುದಾಗಿ ಸಚಿವರು ಭರವಸೆ ನೀಡಿದರು.
ಭೂ ಸ್ವಾಧೀನ ಅಕ್ರಮ ಸಿಐಡಿ ತನಿಖೆ: ಕೆಐಎಡಿಬಿ ಧಾರವಾಡ ವಲಯ ಕಚೇರಿ ವ್ಯಾಪ್ತಿಯಲ್ಲಿ ಸ್ವಾಧೀನಪಡಿಸಿಕೊಂಡ ಜಮೀನುಗಳಿಗೆ ನಕಲಿ ದಾಖಲೆಗಳನ್ನ ಸೃಷ್ಟಿಸಿ ಎರಡು ಬಾರಿ ಹೆಚ್ಚಿನ ಪರಿಹಾರ ನೀಡಿದ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಎಂ ಬಿ ಪಾಟೀಲ್ ತಿಳಿಸಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ 2022-23 ಸಾಲಿನಲ್ಲಿ ಕೆಐಎಡಿಬಿ ಧಾರವಾಡ ವಲಯ ಕಚೇರಿ ವ್ಯಾಪ್ತಿಯಲ್ಲಿ ಸ್ವಾಧೀನಪಡಿಸಿಕೊಂಡ ಜಮೀನುಗಳಿಗೆ ನಕಲಿ ದಾಖಲೆಗಳನ್ನ ಸೃಷ್ಟಿಸಿ ಎರಡು ಬಾರಿ ಹೆಚ್ಚಿನ ಪರಿಹಾರ ನೀಡಿರುವುದು ಖಾತೆದಾರರಿಗೆ ಬದಲಾಗಿ ಬೇರೆಯವರಿಗೆ ಹಣ ವಿತರಿಸಿದ್ದಾರೆ. ಇದರಲ್ಲಿ ನಾಲ್ವರು ಅಧಿಕಾರಿಗಳ ಕೈವಾಡ ಇದೆ. ಅವರನ್ನ ವರ್ಗಾವಣೆ ಮಾಡಿಸಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್, ಎರಡು ಬಾರಿ ಹಣ ಪಾವತಿ ಮಾಡಿರುವುದು ನಿಜ. ಅದು ಗೊತ್ತಾದ ತಕ್ಷಣ ವಿಚಾರಣೆ ಮಾಡಿದ್ದಾರೆ.
ಸಿಐಡಿ ತನಿಖೆಗೆ ಕೊಟ್ಟಿದ್ದೇವೆ. ಕೆಲವರನ್ನು ವಶಕ್ಕೆ ಪಡೆದು ವಿಚಾರ ನಡೆಸುತ್ತಿದ್ದಾರೆ. ಮೂಲ ಜಮೀನುದಾರರಿಗೆ ಹಣ ನೀಡದೆ ಬೇರೆಯವರು ಹಣ ಪಡೆದಿದ್ದಾರೆ. 11 ಮಂದಿಯ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ. ಅಧಿಕಾರಿಗಳ ಪಾತ್ರ ಇದ್ದರೆ ಅದನ್ನ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ. ಮೊದಲು ಇಲಾಖೆಯ ತನಿಖೆ ನಡೆಸಿದ್ದೇವೆ ನಂತರ ಸಿಐಡಿಗೆ ವಹಿಸಿದ್ದೇವೆ. ಅಧಿಕಾರಿಗಳು ಅವ್ಯವಹಾರದಲ್ಲಿ ಪಾಲ್ಗೊಂಡಿದ್ದರೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ. ವಿ ಡಿ ಸಜ್ಜನ್, ಎಂ ಕೆ ಶಿಂಪಿ, ಶಂಕರ್ ತಳವಾರ್, ಹೇಮಚಂದ್ರ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ನೀವು ಹೇಳಿದವರ ಬಗ್ಗೆಯೂ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.
ಸಚಿವರ ಗೈರಿಗೆ ಪ್ರತಿ ಪಕ್ಷಗಳ ಕಿಡಿ: ಕಲಾಪ ಆರಂಭ ಆಗುತ್ತಿದ್ದಂತೆ ಸಚಿವರ ಗೈರಿಗೆ ಪ್ರತಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಪ್ರಶ್ನೋತ್ತರ ಕಲಾಪಕ್ಕೆ ಹಾಜರಾಗಬೇಕಾದ ಸಚಿವರೇ ಗೈರಾಗಿದ್ದಾರೆ. ಸಭಾ ನಾಯಕರೂ ಸಭೆಗೆ ಬಂದಿಲ್ಲ ಎಂದು ಟೀಕಿಸಿದರು. ಇದಕ್ಕೆ ಪ್ರತಿಪಕ್ಷ ನಾಯಕರೇ ಇಲ್ಲವಲ್ಲ ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ತಿರುಗೇಟು ನೀಡಿದರು. ಇದಕ್ಕೆ ಕೆರಳಿದ ಬಿಜೆಪಿ ಸದಸ್ಯ ಮಲ್ಕಾಪುರೆ ಹಾಗೂ ಜೆಡಿಎಸ್ ಸದಸ್ಯ ಶರವಣ ಸಭಾ ನಾಯಕರು, ಸಚಿವರು ಇಲ್ಲ ಅಂದರೆ ವಿಪಕ್ಷ ನಾಯಕರು ಇಲ್ಲ ಅಂತೀರಾ? ಏನು ಮಾತಾಡ್ತಾ ಇದ್ದೀರಾ?, ಸ್ವಲ್ಪನಾದರೂ ಜವಾಬ್ದಾರಿ ಬೇಡವೇ?. ನೀವು ಆಡಳಿತ ಪಕ್ಷದಲ್ಲಿದ್ದೀರ, ನಿಮ್ಮ ವರ್ತನೆ ಸರಿಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ರಘುನಾಥ್ ಮಲ್ಕಾಪುರೆ ಪ್ರಶ್ನೆಗೆ ಉತ್ತರಿಸಬೇಕಾದ ಪೌರಾಡಳಿ ಸಚಿವ ರಹೀಮ್ ಖಾನ್ ಗೈರಾಗಿದ್ದರು. ಇದಕ್ಕೆ ಗರಂ ಆಗಿದ್ದ ಬಿಜೆಪಿ ಸದಸ್ಯರು ಸರ್ಕಾರದ ವಿರುದ್ಧ ಕಿಡಿಕಾರಿದರು. ಈ ವೇಳೆ ಸಭಾಪತಿ ಮಧ್ಯ ಪ್ರವೇಶದಿಂದ ವಾತಾವರಣ ತಿಳಿಯಾಯಿತು. ನಂತರ ಪ್ರಶ್ನೋತ್ತರ ಕಲಾಪವನ್ನು ಮುಂದುವರೆಸಲಾಯಿತು.
ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯನವರೇ ಪರಿಶೀಲನೆ ಪದ ಕೈಬಿಟ್ಟು, ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸಿ: ಕೋಡಿಹಳ್ಳಿ ಚಂದ್ರಶೇಖರ್