ಬೆಂಗಳೂರು:ಬಜರಂಗದಳ ಸಂಘಟನೆ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದಲ್ಲಿ 8 ಮಂದಿ ಆರೋಪಿಗಳನ್ನು ಬಂಧಿಸಿರುವ ಶಿವಮೊಗ್ಗ ಪೊಲೀಸರಿಗೆ ಪ್ರಾಥಮಿಕ ವಿಚಾರಣೆ ವೇಳೆ ದುಷ್ಕೃತಕ್ಕೆ ಮತೀಯ ಕಾರಣ ಎಂಬುದು ತಿಳಿದುಬಂದಿದೆ ಎನ್ನಲಾಗ್ತಿದೆ.
ಮತ್ತೊಂದೆಡೆ ಹತ್ಯೆ ಖಂಡಿಸಿ ರಾಜ್ಯದೆಲ್ಲೆಡೆ ವಿವಿಧ ಸಂಘ-ಸಂಸ್ಥೆಗಳು ಪ್ರತಿಭಟನೆ ನಡೆಸುತ್ತಿವೆ. ಹತ್ಯೆ ಹಿಂದೆ ಪ್ರಭಾವಿ ಮತೀಯ ಶಕ್ತಿಗಳು ಅಡಗಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಬಂಧಿಸಿ ಸಮಗ್ರ ತನಿಖೆ ನಡೆಸಲು ರಾಷ್ಟ್ರೀಯ ತನಿಖಾ ತಂಡಕ್ಕೆ (ಎನ್ಐಎ) ವಹಿಸುವಂತೆ ರಾಜ್ಯ ಸರ್ಕಾರಕ್ಕೆ ಸಾರ್ವಜನಿಕ ವಲಯದಿಂದ ಒತ್ತಾಯ ಕೇಳಿಬರುತ್ತಿದೆ.
ಇನ್ನೊಂದೆಡೆ ಹರ್ಷ ಕೊಲೆಯಾದ ಕೆಲವೇ ಗಂಟೆಗಳಲ್ಲಿ ಆರು ಮಂದಿ ಆರೋಪಿಗಳನ್ನು ಬಂಧಿಸಿ ಮತ್ತೆ ಹಲವರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆಯನ್ನು ಚುರುಕುಗೊಳಿಸಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕ ಪೊಲೀಸರು ನೀಡುವ ವರದಿ ಆಧಾರದ ಮೇಲೆ ಎನ್ಐಐಗೆ ವಹಿಸಬೇಕೋ, ಬೇಡವೋ ಎಂಬುದರ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ.
ಇದಕ್ಕೆ ಪೂರಕವೆಂಬಂತೆ ಇಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, 'ಹರ್ಷ ಕೊಲೆ ಪ್ರಕರಣದಲ್ಲಿ ಹಲವರನ್ನು ಬಂಧಿಸಲಾಗಿದೆ. ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ತನಿಖೆ ತೀವ್ರವಾಗಿ ನಡೆಯುತ್ತಿದೆ. ಅದರ ಆಧಾರದ ಮೇಲೆ ಮುಂದಿನ ತನಿಖೆಯನ್ನು ಯಾವ ಸಂಸ್ಥೆಗೆ ನೀಡಬೇಕೆನ್ನುವುದು ನಿರ್ಧಾರವಾಗುತ್ತದೆ' ಎಂದು ಹೇಳಿದ್ದಾರೆ.
ಈ ಹಿಂದೆ ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರದಲ್ಲಿ ಆರ್ಎಸ್ಎಸ್ ಕಾರ್ಯಕರ್ತ ರುದ್ರೇಶ್ ಅವರನ್ನ ಬೆಂಗಳೂರಿನ ಕಾಮರಾಜ್ ರಸ್ತೆಯಲ್ಲಿ ಹಾಡಹಾಗಲೇ ಆರೋಪಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಹತ್ಯೆ ಹಿಂದೆ ಆರೋಪಿಗಳು ಮತೀಯ ಶಕ್ತಿಯೊಂದಿಗೆ ಗುರುತಿಸಿಕೊಂಡು ವ್ಯವಸ್ಥಿತವಾಗಿ ಕೊಲೆ ಮಾಡಿರುವ ಆರೋಪದಡಿ ಎಎನ್ಐ ಸಹ ಮಧ್ಯಪ್ರವೇಶಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿತ್ತು. ಇದೀಗ ಬಿಜೆಪಿ ಸರ್ಕಾರವಿರುವಾಗಲೇ ಹಿಂದೂಪರ ಕಾರ್ಯಕರ್ತನ ಹತ್ಯೆಯಾಗಿದೆ.
ಪ್ರಕರಣದಲ್ಲಿ ಬಾಹ್ಯ ಶಕ್ತಿಯ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ. ಈ ಆಧಾರದ ಹಿನ್ನೆಲೆಯಲ್ಲಿ ಪ್ರಕರಣವನ್ನು ಎನ್ಐಎಗೆ ವಹಿಸಲು ಸರ್ಕಾರ ಚಿಂತಿಸುತ್ತಿದೆ. ಮತ್ತೊಂದು ಆಯಾಮದಲ್ಲಿ ಎನ್ಐಎ ತನಿಖೆಗೆ ವಹಿಸುವುದಿಲ್ಲ ಎಂದು ಹೇಳಲಾಗುತ್ತಿದೆ.
ಈ ಹಿಂದೆ ಹತ್ಯೆಯಾದ ಹಿಂದೂಪರ ಸಂಘಟನೆಯ ಕಾರ್ಯಕರ್ತರಾದ ಶರತ್ ಮಡಿವಾಳ, ಕುಟ್ಟಪ್ಪ, ರಾಜು, ಪ್ರವೀಣ್ ಪೂಜಾರಿ ಕೊಲೆ ಪ್ರಕರಣಗಳನ್ನ ರಾಜ್ಯ ಪೊಲೀಸರೇ ತನಿಖೆ ಕೈಗೊಂಡು ಆರೋಪಿಗಳನ್ನು ಹೆಡೆಮುರಿಕಟ್ಟುವಲ್ಲಿ ಸಫಲರಾಗಿದ್ದರು. ಹೀಗಾಗಿ, ಹರ್ಷ ಕೊಲೆ ಪ್ರಕರಣವನ್ನ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿರುವುದೇ ಉತ್ತಮ ಎಂಬ ಅಭಿಪ್ರಾಯಗಳು ಕೇಳಿಬಂದಿವೆ. ಈ ಮಧ್ಯೆ ಎನ್ಎಐ ಸುಮೊಟೊ ಕೇಸ್ ದಾಖಲಿಸಿಕೊಂಡು ತನಿಖೆಗೆ ಇಳಿದರೂ ಆಚ್ಚರಿಯಿಲ್ಲ ಎನ್ನಲಾಗ್ತಿದೆ.
ಓದಿ:ವಿಜಯಪುರ: ಹರ್ಷ ಹತ್ಯೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಗನ್ ಇಟ್ಕೊಂಡು ಭಾಗವಹಿಸಿದ ಹಿಂದೂ ಮುಖಂಡ