ಕರ್ನಾಟಕ

karnataka

ETV Bharat / state

ವಿಶ್ವ ವಿಖ್ಯಾತ ಹಂಪಿ ಉತ್ಸವ ಮುಂದೂಡಿಕೆ: ಫೆಬ್ರವರಿಯಲ್ಲಿ ನಡೆಸಲು ಸರ್ಕಾರ ನಿರ್ಧಾರ

ಬರ ಪರಿಸ್ಥಿತಿ ಹಿನ್ನೆಲೆ ಈ ಬಾರಿಯ ಹಂಪಿ ಉತ್ಸವ ಮುಂದಿನ ವರ್ಷ ನಡೆಸಲು ಸರ್ಕಾರ ನಿರ್ಧರಿಸಿದೆ.

ವಿಶ್ವ ವಿಖ್ಯಾತ ಹಂಪಿ ಉತ್ಸವ ಮುಂದೂಡಿಕೆ
ವಿಶ್ವ ವಿಖ್ಯಾತ ಹಂಪಿ ಉತ್ಸವ ಮುಂದೂಡಿಕೆ

By ETV Bharat Karnataka Team

Published : Sep 13, 2023, 5:59 PM IST

ಬೆಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ವಿಶ್ವ ವಿಖ್ಯಾತ ಹಂಪಿ ಉತ್ಸವ ಮುಂದಿನ ವರ್ಷ ಜನವರಿ ಅಥವಾ ಫೆಬ್ರವರಿಯಲ್ಲಿ ನಡೆಸಲು ತೀರ್ಮಾನ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಅವರ ಅಧ್ಯಕ್ಷತೆಯಲ್ಲಿ ಇಂದು ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ವಿಜಯನಗರ - ಬಳ್ಳಾರಿ ಸೇರಿದಂತೆ ಬಹುತೇಕ ಜಿಲ್ಲೆಗಳ ಹೆಚ್ಚಿನ ಸಂಖ್ಯೆಯ ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ. ಹೀಗಾಗಿ ಇಂತಹ ಸ್ಥಿತಿಯಲ್ಲಿ ಉತ್ಸವ ನಡೆಸುವುದು ಕಷ್ಟ. ಫೆಬ್ರವರಿ ವೇಳೆಗೆ ಪರಿಸ್ಥಿತಿ ನೋಡಿಕೊಂಡು ಉತ್ಸವ ಮಾಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಈ ಮುಂಚೆ ನವೆಂಬರ್​ನಲ್ಲಿ ಉತ್ಸವ ನಡೆಸಲು ನಿರ್ಧಾರ ಮಾಡಲಾಗಿತ್ತು. ಆದರೆ, ಬರ ಪರಿಸ್ಥಿತಿಯಿಂದಾಗಿ ಮುಖ್ಯಮಂತ್ರಿ ಅವರು ಫೆಬ್ರವರಿಯಲ್ಲಿ ನಡೆಸಿ ಎಂದು ಸಲಹೆ ನೀಡಿದ್ದು, ಫೆಬ್ರವರಿಯಲ್ಲಿ ನಡೆಸಲು ತೀರ್ಮಾನ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ. ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿಗಳಾದ ನಸೀರ್ ಅಹಮದ್, ಗೋವಿಂದರಾಜು, ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಮಂಜುಳಾ, ಮುಖ್ಯಮಂತ್ರಿ ಅವರ ಜಂಟಿ ಕಾರ್ಯದರ್ಶಿ ಜಯರಾಮ್, ಜಿಲ್ಲಾಧಿಕಾರಿ ದಿವಾಕರ್ ಸಭೆಯಲ್ಲಿ ಉಪಸ್ಥಿತರಿದ್ದರು.

161 ತಾಲೂಕುಗಳು ಬರ ಘೋಷಣೆಗೆ ಅರ್ಹ:ಈ ವರ್ಷ ಮಳೆ ಕುಂಠಿತಗೊಂಡ ಕಾರಣ ಬರ ತಾಲೂಕುಗಳ ಘೋಷಣೆ ಸಂಬಂಧ ಇಂದು ವಿಧಾನಸೌಧದಲ್ಲಿ ಸಚಿವ ಸಂಪುಟ ಉಪಸಮಿತಿ ಸಭೆ ನಡೆಯಿತು. ಸಭೆಯಲ್ಲಿ ರಾಜ್ಯದ 161 ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆ ಎದುರಾಗಿದ್ದು, ಬರ ಘೋಷಣೆ ಸಂಬಂಧ ಸಚಿವ ಸಂಪುಟ ಉಪಸಮಿತಿ ಸಿಎಂ ಅವರಿಗೆ ಶಿಫಾರಸು ಮಾಡಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಕಳೆದ ವಾರ ನಡೆದ ನಾಲ್ಕನೇ ಸಂಪುಟ ಉಪ ಸಮಿತಿ ಸಭೆಯಲ್ಲಿ 62 ತಾಲೂಕುಗಳು ಬರ ಘೋಷಣೆಗೆ ಅರ್ಹ ಎಂಬ ತೀರ್ಮಾನ ಮಾಡಲಾಗಿತ್ತು. ಆದರೆ ಈ ವರ್ಷ ರಾಜ್ಯಾದ್ಯಂತ ತೀವ್ರ ಮಳೆ ಕೊರತೆ ಉಂಟಾದ ಕಾರಣ 134 ತಾಲೂಕುಗಳಲ್ಲಿ ಮತ್ತೊಂದು ಸುತ್ತಿನ ಸಮೀಕ್ಷೆ ನಡೆಸಲಾಗಿತ್ತು. ಸಮೀಕ್ಷೆ ವರದಿ ಆದಾರದ ಮೇಲೆ ಮತ್ತು ಕೇಂದ್ರ ಸರ್ಕಾರದ ಬರ ಮಾರ್ಗಸೂಚಿಯಂತೆ ಒಟ್ಟಾರೆ 161 ತಾಲೂಕುಗಳು ಬರ ಘೋಷಣೆಗೆ ಅರ್ಹವಾಗಿವೆ ಎಂದು ಇಂದಿನ ಸಭೆಯಲ್ಲಿ ತಿಳಿದು ಬಂದಿದೆ.

ಇದನ್ನೂ ಓದಿ:161 ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆ.. ಬರ ಘೋಷಣೆ ಸಚಿವ ಸಂಪುಟ ಉಪ ಸಮಿತಿ ಶಿಫಾರಸು: ಕೃಷ್ಣ ಬೈರೇಗೌಡ

ABOUT THE AUTHOR

...view details