ಬೆಂಗಳೂರು: ಈ ಬಾರಿಯ ನಾಡಹಬ್ಬ ದಸರಾವನ್ನು ಅದ್ಧೂರಿಯಾಗಿ ಮಾಡಲು ತೀರ್ಮಾನಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು. ವಿಧಾನಸೌಧದಲ್ಲಿ ಮೈಸೂರು ದಸರಾ ಮಹೋತ್ಸವ 2022ರ ಉನ್ನತ ಮಟ್ಟದ ಸಮಿತಿ ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಎಂ, ಆ ಭಾಗದ ಜನ ಪ್ರತಿನಿಧಿಗಳು ಅದ್ಧೂರಿ ದಸರಾ ಹಬ್ಬ ಆಚರಣೆಗೆ ಮನವಿ ಮಾಡಿದ್ದಾರೆ. ಕೋವಿಡ್ ಬಳಿಕ ನಡೆಯುತ್ತಿರುವ ದಸರಾ ಅದ್ಧೂರಿಯಾಗಿ ಮಾಡಲು ಚರ್ಚೆ ಆಗಿದೆ ಎಂದರು.
ವಸ್ತು ಪ್ರದರ್ಶನವನ್ನು ಹದಿನೈದು ದಿನಕ್ಕೂ ಮೊದಲೇ ಪ್ರಾರಂಭ ಮಾಡ್ತೇವೆ. ಈ ಬಾರಿ ಸ್ಥಳೀಯ ಕಲಾವಿದರಿಗೆ ಹೆಚ್ಚು ಒತ್ತು ನೀಡಲಿದ್ದೇವೆ. ದಿನಕ್ಕೆ ಒಬ್ಬರು ರಾಷ್ಟ್ರೀಯ ಮಟ್ಟದ ಕಲಾಕಾರರನ್ನು ಕರೆಸುತ್ತೇವೆ . ಶ್ರೀರಂಗಪಟ್ಟಣ, ಚಾಮರಾಜನಗರದಲ್ಲೂ ವೈಭೋವಪೂರಿತವಾಗಿ ದಸರಾ ಮಾಡಲು ತೀರ್ಮಾನಿಸಿದ್ದೇವೆ. ಅನ್ಯ ರಾಜ್ಯಗಳಲ್ಲೂ ದಸರಾ ಸಂಬಂಧ ಪ್ರಚಾರ ಮಾಡಲು ಸೂಚನೆ ನೀಡಲಾಗಿದೆ ಎಂದು ಸಿಎಂ ವಿವರಿಸಿದರು.
ಮೈಸೂರು ಮತ್ತು ಹಂಪಿ ಟೂರಿಸಂಗೆ ಆದೇಶ ಹೊರಡಿಸಲಾಗುವುದು. ಅದರಂತೆ ಒಂದೇ ಟಿಕೆಟ್ನಲ್ಲಿ ಹಂಪಿ ಮತ್ತು ಮೈಸೂರು ನೋಡಬಹುದು. ವಿದೇಶದಿಂದ ಟಿಕೆಟ್ ಬುಕ್ ಮಾಡೋರಿಗೆ ಹೊರಗಡೆಯಿಂದ ಬರೋರಿಗೆ ಅನುಕೂಲ ಮಾಡಿಕೊಡಲಾಗುವುದು. 26 /9/2022 ಕ್ಕೆ ದಸರಾ ಆರಂಭವಾದರೆ, 5/10/2022 ಕ್ಕೆ ವಿಜಯದಶಮಿ, 5/10/2022ಕ್ಕೆ ಧ್ವಜ ಪೂಜೆ, 5/10/2022 ಕ್ಕೆ ನಂದಿ ಪೂಜೆ ನೆರವೇರಲಿದೆ. 7/8/2022 ಕ್ಕೆ ಗಜಪಯಣ ,10/8/2022 ಅರಮನೆಯ ಪ್ರವೇಶ , 7/10/2022 ಕ್ಕೆ ಗಜಪಡೆ ನಿರ್ಗಮನವಾಗಲಿದೆ ಎಂದು ವಿವರಿಸಿದರು.
ದಸರಾ ಹಬ್ಬಕ್ಕೆ 10 ಕೋಟಿ ರೂ. ಮುಡಾದಿಂದ ನೀಡಲಾಗುವುದು. ಉಳಿದಂತೆ ಸಿಎಸ್ ಆರ್ ಫಂಡ್ ಬಳಕೆಗೆ ಸೂಚನೆ ನೀಡಲಾಗಿದೆ. ಅರಮನೆ ಹೊರಗಡೆ ಹಬ್ಬ ಆಚರಣೆಗೆ ಎಷ್ಟು ವೆಚ್ಚ ಆಗುತ್ತೋ ಆ ಅನುದಾನವನ್ನು ಸರ್ಕಾರವೇ ಭರಿಸುತ್ತದೆ ಎಂದು ತಿಳಿಸಿದರು. ಬಾಗಿನ ಅರ್ಪಣೆಗೆ ರಾಜವಂಶಸ್ಥರಿಗೆ ಕರೆದಿಲ್ಲ ಎಂಬ ವಿಪಕ್ಷಗಳ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ರಾಜವಂಶಸ್ಥರನ್ನು ಕರೆದಿರಲಿಲ್ಲ. ಈಗ ಅವರನ್ನು ಕರೆಯೋದ್ರಲ್ಲಿ ತಪ್ಪೇನೂ ಇಲ್ಲ. ಇದರ ಬಗ್ಗೆ ಮಾತನಾಡುತ್ತೇನೆ ಎಂದರು.