ಕರ್ನಾಟಕ

karnataka

ETV Bharat / state

ಕೆಪಿಟಿಸಿಎಲ್ ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ: ವರದಿ ಸಲ್ಲಿಕೆಗೆ ಸಮಿತಿ ರಚನೆ

ಕೆಪಿಟಿಸಿಎಲ್ ಮತ್ತು ಎಸ್ಕಾಂ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಒದಗಿಸಲು ಸರ್ಕಾರ ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಕಾನೂನಿನ ಅವಕಾಶಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ತಿಳಿಸಿದ್ದಾರೆ.

Energy Minister K J George
ಇಂಧನ ಸಚಿವ ಕೆ ಜೆ ಜಾರ್ಜ್

By ETV Bharat Karnataka Team

Published : Dec 23, 2023, 3:50 PM IST

ಬೆಂಗಳೂರು:ಕೆಪಿಟಿಸಿಎಲ್ ಮತ್ತು ಎಸ್ಕಾಂ ತಾಂತ್ರಿಕ ವಿಭಾಗದಲ್ಲಿ 15-20 ವರ್ಷದಿಂದ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರರನ್ನು ಒಳಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡು ಸೇವಾ ಭದ್ರತೆ ಒದಗಿಸುವ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ನಿಟ್ಟಿನಲ್ಲಿ ಕಾನೂನಿನ ಅವಕಾಶಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ಹೇಳಿದರು.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಕೆಪಿಟಿಸಿಎಲ್ ಮತ್ತು ಎಸ್ಕಾಂಗಳಲ್ಲಿ ಸ್ಟೇಷನ್ ಆಪರೇಟರ್​ಗಳು, ಸ್ಟೇಷನ್ ಸಹಾಯಕರು, ಗ್ಯಾಂಗ್​ಮೆನ್ ಮತ್ತು ಮೀಟರ್ ರೀಡರ್ ಹುದ್ದೆಗಳಲ್ಲಿ ಸಾಕಷ್ಟು ಮಂದಿ 15-20 ವರ್ಷಗಳಿಗಿಂತ ಹೆಚ್ಚು ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸೇವಾ ಭದ್ರತೆ ಒದಗಿಸಿ ಒಳಗುತ್ತಿಗೆ ವ್ಯಾಪ್ತಿಗೆ ತರಲು ಸರ್ಕಾರ ಯೋಚಿಸಿದೆ ಎಂದು ತಿಳಿಸಿದರು.

ಈ ಹಿನ್ನೆಲೆ ಸಾಧಕ - ಬಾಧಕಗಳ ಬಗ್ಗೆ ಪರಿಶೀಲಿಸಲು ಇಲಾಖೆಯ ಅಪರಮುಖ್ಯ ಕಾರ್ಯದರ್ಶಿ ಗೌರವ ಗುಪ್ತ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿಯು ಈಗಾಗಲೇ ಒಂದು ಸುತ್ತಿನ ಸಮಾಲೋಚನೆ ನಡೆಸಿದೆ. ವಿವಿಧ ಹುದ್ದೆಗಳಲ್ಲಿ ದಶಕಕ್ಕೂ ಹೆಚ್ಚು ಕಾಲ ಕೆಲಸ ಮಾಡುತ್ತಿರುವವರನ್ನು ಒಳಗುತ್ತಿಗೆಗೆ ಒಳಪಡಿಸುವ ಕುರಿತು ನಿಯಮಗಳಲ್ಲಿ ಅವಕಾಶಗಳಿರುವ ಬಗ್ಗೆ ಪರಿಶೀಲಿಸಿ ಡಿಸೆಂಬರ್ 29ರೊಳಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ. ಈ ವರದಿ ಆಧರಿಸಿ ಸರಕಾರ ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಪೌರಕಾರ್ಮಿಕರ ಸಮಸ್ಯೆ ಅರಿವು ಸರ್ಕಾರಕ್ಕಿದೆ: ಡಿ ಕೆ ಶಿವಕುಮಾರ್:ಪೌರಕಾರ್ಮಿಕರನ್ನು ಕಾಯಂಗೊಳಿಸಬೇಕು ಎಂದು ನೀವು ಹೋರಾಟ ಹಮ್ಮಿಕೊಂಡಿದ್ದೀರಿ.ಇದು ನಿಮ್ಮ ಬದುಕಿಗಾಗಿ ನಡೆಯುತ್ತಿರುವ ಹೋರಾಟ. ಈ ಹಿಂದಿನ ಸರ್ಕಾರ ಚುನಾವಣೆಗೆ ಮುನ್ನ ನಿಮ್ಮ ಜತೆ ಮಾತುಕತೆಗೆ ಮುಂದಾದರೂ ಆ ಮಾತುಕತೆ ವಿಫಲವಾಯಿತು. ನಂತರ ನೀವೆಲ್ಲರೂ ನಮಗೆ ಬೆಂಬಲ ನೀಡಿ ಆಶೀರ್ವಾದ ಮಾಡಿದ್ದೀರಿ. ಹೀಗಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ನಿಮ್ಮ ಪರಿಸ್ಥಿತಿ ಬಗ್ಗೆ ನಮಗೆ ಅರಿವಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಇಂದು ಪೌರಾಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಅಹವಾಲು ಆಲಿಸಿ ಮಾತನಾಡಿದ ಅವರು, ನಮ್ಮ ಪ್ರಣಾಳಿಕೆಯಲ್ಲಿ ಅನೇಕ ಭರವಸೆಗಳನ್ನು ಸೇರಿಸಿದ್ದೇವೆ. ನಾವು ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿದ್ದೇವೆ. ಇದಕ್ಕಾಗಿ ಸುಮಾರು 60 ಸಾವಿರ ಕೋಟಿಯನ್ನು ನಿಗದಿ ಮಾಡಿ ಕೊಟ್ಟ ಮಾತಿನಂತೆ ನಡೆಯುತ್ತಿದ್ದೇವೆ. ಸದ್ಯದಲ್ಲೇ ನಿಮ್ಮ ಪದಾಧಿಕಾರಿಗಳ ಹಾಗೂ ಅಧಿಕಾರಿಗಳ ಸಭೆ ಕರೆಯುತ್ತೇನೆ. ಸರ್ಕಾರ ಹಾಗೂ ನಿಮಗೆ ಒಳ್ಳೆಯದಾಗುವಂತೆ ಆರ್ಥಿಕ ಪರಿಸ್ಥಿತಿ ಹಾಗೂ ಕಾನೂನು ಚೌಕಟ್ಟಿನಲ್ಲಿ ತೀರ್ಮಾನ ಮಾಡಲಿದೆ ಎಂದು ಭರವಸೆ ನೀಡಿದರು.

ನಗರದ ಸ್ವಚ್ಛತೆ ಕಾಪಾಡುತ್ತಾ ನಿಮ್ಮ ಬದುಕಿನಲ್ಲಿ ಸ್ವಾಭಿಮಾನದಿಂದ ದೇಶ ಸೇವೆ ಮಾಡುತ್ತಿದ್ದೀರಿ. ನಿಮ್ಮ ಬೇಡಿಕೆ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ಮಾಡುತ್ತೇನೆ. ಪ್ರತಿಭಟನೆ ಕೈಬಿಡಿ ಎಂದು ಮನವಿ ಮಾಡಿದರು.

ಇದನ್ನೂಓದಿ:ಹಿಜಾಬ್ ನಿಷೇಧ ವಾಪಸ್ ಪಡೆಯುವ ವಿಚಾರ: ಸರ್ಕಾರದ ಮಟ್ಟದಲ್ಲಿ ಚರ್ಚೆ ಎಂದ ಸಿಎಂ

ABOUT THE AUTHOR

...view details