ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ಬೆಂಗಳೂರು:''ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಶಿವಮೊಗ್ಗದಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದೇ ಘಟನೆಗೆ ಕಾರಣವಾಗಿದೆ'' ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.
ಆರ್.ಟಿ. ನಗರ ನಿವಾಸದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಶಿವಮೊಗ್ಗ ಪ್ರಕ್ಷುಬ್ಧ ವಾತಾವರಣ ಇರುವ ನಗರ. ಅಲ್ಲಿ ಹಿಂದೆ ಹಲವಾರು ಘಟನೆಗಳು ನಡೆದಿವೆ. ಇಂತಹ ಧಾರ್ಮಿಕ ಘಟನೆ ನಡೆದಾಗ ಪೊಲೀಸರು ಸೂಕ್ತ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿಲ್ಲ'' ಎಂದು ಆರೋಪಿಸಿದರು.
''ಶಿವಮೊಗ್ಗದ ಮೂರು ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಇಂತ ಘಟನೆ ನಡೆಯುತ್ತದೆ. ಇಂತ ಸ್ಟೇಷನ್‌ಗೆ ವರ್ಗಾವಣೆ ಮಾಡುವಾಗ ಸಮರ್ಥ ಅಧಿಕಾರಿ ಹಾಕಬೇಕು. ಸ್ವಹಿತಾಸಕ್ತಿಗಳಿಗೆ ಬಲಿಯಾಗಿ ಅಧಿಕಾರಿಗಳ ವರ್ಗಾವಣೆ ಮಾಡಿದರೆ, ಅವರು ಕಾನೂನು ಕಾಪಾಡುವ ಬದಲು ಬೇರೆ ಕೆಲಸದಲ್ಲಿಯೇ ಮಗ್ನರಾಗುತ್ತಾರೆ. ಇದರಿಂದ ಸಮಾಜಘಾತುಕ ಶಕ್ತಿಗಳಿಗೆ ಕುಮ್ಮಕ್ಕು ಸಿಗುತ್ತದೆ. ಇದರ ಮೂಲ ಪ್ರತಿ ಜಿಲ್ಲೆಯಲ್ಲಿ ಕ್ಲಬ್, ರಿಯಲ್ ಎಸ್ಟೇಟ್ ಮಾಫಿಯಾ ಶುರುವಾಗಿದೆ. ಇದನ್ನು ಸಮಗ್ರವಾಗಿ ನಿಭಾಯಿಸಬೇಕು. ಶಾಂತಿ ಕಾಪಾಡಬೇಕು. ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು. ಸರ್ಕಾರದಿಂದ ಪೊಲೀಸರಿಗೆ ಒಂದು ಸ್ಪಷ್ಟ ನಿರ್ದೇಶನ ಹೋಗಬೇಕು. ಅಧಿಕಾರಿಗಳನ್ನು ಯಾವುದೇ ಮುಲಾಜಿಲ್ಲದೇ ಟ್ರಾನ್ಸ್‌ಫರ್ ಮಾಡಿದ್ದರೆ, ಇಂತ ಘಟನೆ ನಿಲ್ಲುತ್ತದೆ'' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾತಲ್ಲಿ ಮಾತ್ರ ಗಾಂಧಿ:ಗಾಂಧಿ ಕಂಡ ಕನಸು ಕರ್ನಾಟಕದಲ್ಲಿ ನನಸು ಅಂತ ಸರ್ಕಾರ ಜಾಹೀರಾತು ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ''ಇವರು ಮಾಡುವುದೆಲ್ಲಾ ಗಾಂಧಿ ವಿರೋಧಿ ನೀತಿ. ಸುಳ್ಳು ಹೇಳುವುದರಿಂದ ಗಾಂಧಿ ವಿರೋಧಿ ನೀತಿ ಪ್ರಾರಂಭ ಆಗುತ್ತದೆ. ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುವುದು. ಸಿಕ್ಕಲ್ಲೆಲ್ಲಾ ಮದ್ಯದಂಗಡಿ ಶುರು ಮಾಡಿದ್ದಾರೆ. ಪ್ರತಿಯೊಂದು ಗ್ರಾಮ ಪಂಚಾಯತಿಯಲ್ಲಿ ಮದ್ಯದಂಗಡಿ ತೆರೆಯುತ್ತಿದ್ದಾರೆ. ಹೇಳಲು ಮಾತ್ರ ಗಾಂಧಿ ಶಾಂತಿ ಮಂತ್ರ, ಮಾಡುವುದೆಲ್ಲಾ ಗಾಂಧಿ ವಿರೋಧಿ ಕೆಲಸಗಳು'' ಎಂದು ಆಕ್ರೋಶ ವ್ಯಕ್ತಪಡಿದರು.
ಹಿಂದೂ ವಿರೋಧಿ ಸರ್ಕಾರ- ಕಟೀಲ್ ಆರೋಪ:''ಕರ್ನಾಟಕದ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಸರ್ಕಾರ ಮಾಡುತ್ತಿದೆ'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟೀಕಿಸಿದರು. ಮಂಗಳೂರಿನಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಸೂಕ್ಷ್ಮವಾದ ಜಿಲ್ಲೆಯಾಗಿದ್ದು, ಸರ್ಕಾರ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಿತ್ತು. ಸರ್ಕಾರ ಇವತ್ತು ಕಠಿಣ ಕ್ರಮ ಕೈಗೊಳ್ಳದೇ ಇರುವುದರಿಂದ ಶಾಂತಿ ಸುವ್ಯವಸ್ಥೆ ಕಾಪಾಡಲು ವಿಫಲವಾಗಿದೆ. ಮುಂದೆ ಇದು ಮರುಕಳಿಸದಂತೆ ಸಂಪೂರ್ಣ ತನಿಖೆ ಮಾಡಬೇಕು. ಘಟನೆಯಲ್ಲಿ ಭಾಗಿಯಾದವರನ್ನು ಬಂಧನ ಮಾಡಬೇಕು'' ಎಂದು ಒತ್ತಾಯಿಸಿದರು.
''ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ. ಗೃಹ ಸಚಿವರು, ಮುಖ್ಯಮಂತ್ರಿಗಳು ಇವತ್ತು ಮತಬೇಟೆಗೆ ಮುಂದಾಗಿದ್ದು, ಅಹಿತಕರ ಕೃತ್ಯಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ. ಹಿಂದೆ, ಪ್ರವೀಣ್ ನೆಟ್ಟಾರು, ಹರ್ಷ ಹತ್ಯೆ ಪ್ರಕರಣದಲ್ಲಿ ಎನ್ಐಎ ತನಿಖೆಯ ಮೂಲಕ ಕಠಿಣ ಕ್ರಮ ಕೈಗೊಂಡಿರುವುದರಿಂದ ಶಾಂತಿ ನೆಲೆಸಿತ್ತು. ಡಿ ಜೆ ಹಳ್ಳಿ, ಕೆ ಜೆ ಹಳ್ಳಿ ಪ್ರಕರಣದಲ್ಲಿ ಹುಬ್ಬಳ್ಳಿ ಗಲಭೆಗಳಾದಾಗ ನಮ್ಮ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದರಿಂದ ಪರಿಸ್ಥಿತಿ ಹತೋಟಿಗೆ ಬಂದಿತ್ತು. ಇವತ್ತು ಕೂಡ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರು ಯಾರೇ ಇದ್ದರೂ ಬಂಧಿಸಬೇಕು'' ಎಂದು ಆಗ್ರಹಿಸಿದರು.
ರವಿಕುಮಾರ್ ಟೀಕೆ:ಈ ಗಲಭೆಗೆ ಸರ್ಕಾರದ ಸಂಪೂರ್ಣ ವೈಫಲ್ಯತೆಯೇ ಕಾರಣ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಟೀಕಿಸಿದರು. ‘ನಿಮಗೆ ಸಮರ್ಪಕ ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ಕೂಡಲೇ ರಾಜೀನಾಮೆ ಕೊಡಿ’ ಎಂದು ಅವರು ಆಗ್ರಹಿಸಿದರು.
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದು ಹೊಲಿಗೆ ಹಾಕಿ ಚಿಕಿತ್ಸೆ ನೀಡುವ ಸ್ಥಿತಿ ಬಂದಿದೆ. ಮನೆಗಳಿಗೆ ನುಗ್ಗಿದ್ದಾರೆ. ಇದೆಲ್ಲವನ್ನೂ ನೋಡಿದಾಗ ಸರ್ಕಾರ ಅಲ್ಲಿ ಉದ್ದೇಶಪೂರ್ವಕವಾಗಿ ಗಲಭೆ ನಡೆಸಲು ಪ್ರೇರೇಪಣೆ ಕೊಟ್ಟಂತಿದೆ ಎಂದು ಆರೋಪಿಸಿದರು. ದೊಡ್ಡ ಗಲಭೆ ಆಗದಂತೆ ಪೊಲೀಸರು ತಡೆದಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ್ ಅವರು ಹೇಳಿದ್ದಾರೆ. ದೊಡ್ಡ ಪ್ರಮಾಣದ ಗಲಭೆ ಆಗುವುದೆಂದು ಗೊತ್ತಿದ್ದರೆ ದೊಡ್ಡ ಪ್ರಮಾಣದಲ್ಲಿ ಪೊಲೀಸರನ್ನು ನಿಯೋಜಿಸಬೇಕಿತ್ತಲ್ಲವೇ ಎಂದು ಪ್ರಶ್ನಿಸಿದರು.
ಕಾವೇರಿ ನೀರಿನ ವಿಚಾರದಲ್ಲಿ ಸಮಸ್ಯೆಗಳಿಲ್ಲ, ಕಾನೂನು ಸುವ್ಯವಸ್ಥೆ ಸಮಸ್ಯೆ ಇಲ್ಲ, ಬರಗಾಲದ ಸಮಸ್ಯೆ ಇಲ್ಲ ಎಂದು ನಿರ್ಲಕ್ಷ್ಯತನದಿಂದ ಸಚಿವರು ಇದ್ದಾರೆ. ಗೃಹ ಸಚಿವರಿಗೆ ಈ ರೀತಿ ಹೇಳಿಕೆ ಕೊಡಲು ನಾಚಿಕೆ, ಕಾಳಜಿ, ಮಾನ ಮರ್ಯಾದಿ ಇಲ್ಲವೇ? ಗೃಹ ಸಚಿವರು ಉಡುಪಿ ವಿಡಿಯೋ ಪ್ರಕರಣದಲ್ಲೂ ಇದೇ ಥರದ ಹೇಳಿಕೆ ಕೊಟ್ಟಿದ್ದರು. ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ, ನಿರ್ಲಜ್ಜತನದಿಂದ ಕೂಡಿದೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ ಮೇಲೆ ನಾವು ಸಂಪೂರ್ಣ ಅಭಿವೃದ್ಧಿ ಮಾಡಿದ್ದೇವೆ; ಸಮಾಜದಲ್ಲಿ ಸಮಸ್ಯೆಗಳೇ ಇಲ್ಲ ಎಂದುಕೊಂಡಿದ್ದಾರೆ ಎಂದು ರವಿಕುಮಾರ್ ಟೀಕಿಸಿದರು.
ಮಾಜಿ ಸಚಿವರ ವಾಗ್ದಾಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಸರ್ಕಾರವು ಬಾಯಿಗೆ ಬೀಗ ಹಾಕಿಕೊಂಡಿದೆ. ಇಂಥ ಕೆಟ್ಟ ಕೆಲಸ ಆದರೂ ಪೊಲೀಸರು, ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ಹಲವರು ರೋದಿಸಿದ್ದಾರೆ ಎಂದು ಮಾಜಿ ಸಚಿವರಾದ ಡಾ. ಸಿ ಎನ್ ಅಶ್ವತ್ಥನಾರಾಯಣ್, ಕೋಟ ಶ್ರೀನಿವಾಸ ಪೂಜಾರಿ ಕೂಡ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಗಾಂಧಿ ಅವಹೇಳನಕ್ಕೆ ಅವಕಾಶ ನೀಡಲ್ಲ, ಅವಹೇಳನ ಮಾಡಿದಲ್ಲಿ ಕ್ರಮ: ಸಿದ್ದರಾಮಯ್ಯ ಎಚ್ಚರಿಕೆ..!