ಬೆಂಗಳೂರು:ದೇಶ ಕಾಯುವ ನಮ್ಮ ಸೇನೆಯ ಬಗ್ಗೆ ನಮಗೆ ಹೆಮ್ಮೆಯಿದೆ. ನಮ್ಮ ಸೈನಿಕರು ದೇಶಕ್ಕಾಗಿ ಶ್ರೇಷ್ಠ ಸೇವೆ ಸಲ್ಲಿಸುತ್ತಿದ್ದಾರೆ. ಸೈನಿಕರಿಗೆ ಏನೆಲ್ಲಾ ಬೇಕೋ ಆ ಎಲ್ಲಾ ಸವಲತ್ತುಗಳನ್ನು ಕೊಡಲು ನಮ್ಮ ಸರ್ಕಾರ ಸಿದ್ಧವಿದೆ. ಅವರಿಗೆ ಗೌರವ ಕೊಡುವ ಮತ್ತು ಅವರ ಕುಟುಂಬಕ್ಕೆ ಸಹಾಯ ಮಾಡುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿ ವಿಜಯ್ ದಿವಸ್ ಆಚರಣೆ ಮಾಡಿ ಹುತಾತ್ಮ ಯೋಧರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ರಾಷ್ಟ್ರೀಯ ಸೈನಿಕ ಸ್ಮಾರಕ ಮ್ಯಾನೇಜ್ಮೆಂಟ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೇನಾಧಿಕಾರಿಗಳು, ಹುತಾತ್ಮ ಯೋಧರ ಕುಟುಂಬಸ್ಥರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾದ ಸಿಎಂ ಬೊಮ್ಮಾಯಿ, ಯುದ್ಧ ಭೂಮಿಯಲ್ಲಿ ಮಡಿದ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು.
ಸೈನಿಕರ ಕುಟುಂಬಕ್ಕೆ ಅಗತ್ಯ ಸವಲತ್ತು ಕಲ್ಪಿಸಲು ಸರ್ಕಾರ ಬದ್ಧ: ಸಿಎಂ ಬೊಮ್ಮಾಯಿ ನಂತರ ಮಾತನಾಡಿದ ಸಿಎಂ, ಸಾಕಷ್ಟು ಯುದ್ಧಗಳಲ್ಲಿ ನಮ್ಮ ಕರ್ನಾಟಕದ ಯೋಧರು ಸಾವನ್ನಪ್ಪಿದ್ದಾರೆ, ಕೆಲವರು ಗಾಯಗೊಂಡಿದ್ದಾರೆ. ಅವರ ತ್ಯಾಗದಿಂದ ನಮಗೆ ವಿಜಯ ಸಿಕ್ಕಿದೆ. ರಕ್ಷಣಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸುವುದು ಬಹಳ ಶ್ರೇಷ್ಠ ಸೇವೆಯಾಗಿದೆ. ಬೇರೆ ಯಾವುದೇ ಸೇವೆ ಈ ರೀತಿ ಇರುವುದಿಲ್ಲ. ಕೇವಲ ಡಿಫೆನ್ಸ್ ಫೋರ್ಸ್ ಮಾತ್ರ ದೇಶಕ್ಕಾಗಿ ಇರುವಂಥ ಪಡೆ ಎಂದರು.
ವಿಜಯ ಗಳಿಸುವುದಕ್ಕೆ ಅವರು ಹೊರಾಡುತ್ತಾರೆ, ವಿಜಯ ಗಳಿಸಿದ ಮೇಲೆ ಅವರೇ ವಿಜಯ ನೋಡೋದಕ್ಕೂ ಇರುವುದಿಲ್ಲ. ಕೊರೆಯುವ ಚಳಿ, ಮಳೆ, ಗಾಳಿಯನ್ನದೆ ಸೈನಿಕರು ಹೊರಾಡುತ್ತಾರೆ. ತ್ಯಾಗ ಮಾಡಿದ ಯೋಧರಿಗೆ ನಾನು ಸಲ್ಯೂಟ್ ಮಾಡುತ್ತೇನೆ. ನಮ್ಮ ಭಾರತೀಯ ಸೈನಿಕರದ್ದು ಶಿಸ್ತಿನ ಸೇನೆ ಅದರ ಬಗ್ಗೆ ನಮಗೆ ಹೆಮ್ಮೆ ಇದೆ. ನಮಗೆ ಇನ್ನೂ ಸವಾಲು ಇದೆ, ಕೆಲ ದೇಶಗಳು ಇನ್ನೂ ಗಡಿ ವಿಚಾರದಲ್ಲಿ ತಗಾದೆ ತೆಗೆಯುತ್ತಿವೆ. ನಮ್ಮ ಯೋಧರು ಎಲ್ಲಾ ರೀತಿ ಹೊರಾಡಲು ಸನ್ನದ್ಧಾರಾಗಿದ್ದಾರೆ. ದೇಶದ ಪ್ರಧಾನಮಂತ್ರಿಗಳ ನೇತೃತ್ವದಲ್ಲಿ ದೇಶ ಮುನ್ನುಗುತ್ತಿದೆ. ಅದಕ್ಕೆ ಪೂರಕವಾಗಿ ನಾಗರಿಕರು ಕೈ ಜೋಡಿಸಬೇಕಿದೆ ಎಂದರು.
ಸೈನಿಕ ಪರಿವಾರಕ್ಕೆ ಎಲ್ಲಾ ರೀತಿ ಸಹಾಯವನ್ನ ಸರ್ಕಾರ ನೀಡಲಿದೆ. ತ್ಯಾಗ ಮಾಡಿದ ಸೈನಿಕರಿಗೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ. ಸೈನಿಕ ಕ್ಷೇಮಾಭಿವೃದ್ಧಿ ಇಲಾಖೆಗೆ ಕೊಡುವ ಸವಲತ್ತುಗಳನ್ನು ಎರಡು ಪಟ್ಟು ಕೊಡಲಾಗಿದೆ. ಇನ್ನಷ್ಟು ಕೆಲವು ವಿಚಾರಗಳನ್ನ ಚರ್ಚೆ ನಡೆಸಿ ಸೈನಿಕರಿಗೆ ಏನೆಲ್ಲಾ ಬೇಕು ಆ ಎಲ್ಲಾ ಸೌಲತ್ತುಗಳನ್ನು ಕೊಡಲು ನಮ್ಮ ಸರ್ಕಾರ ಸಿದ್ಧವಿದೆ. ಅವರಿಗೆ ಗೌರವ ಮತ್ತು ಕುಟುಂಬಕ್ಕೆ ಸಹಾಯ ಮಾಡುವ ಕೆಲಸ ನಾವು ಮಾಡುತ್ತೇವೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಅಂದು ವೀರಪ್ಪನ್ ತಾಣ ಇಂದು ಯೋಧರ ಗ್ರಾಮ: ಸೇನೆ ಸೇರುವವರಿಗೆ ಅಕಾಡೆಮಿ ಸ್ಥಾಪಿಸಿದ ಸೈನಿಕರು