ಬೆಂಗಳೂರು :ಮೋಡ ಬಿತ್ತನೆಯಿಂದ ಯಾವ ಪ್ರಯೋಜನವೂ ಇಲ್ಲ. ಅದು ವೈಜ್ಞಾನಿಕವಾಗಿ ಯಶಸ್ಸನ್ನೂ ಕಂಡಿಲ್ಲ ಎಂದು ಸಾರ್ವಜನಿಕ ಲೆಕ್ಕ ಪತ್ರಗಳ ಸಮಿತಿ ಅಧ್ಯಕ್ಷರು ಈ ಹಿಂದೆ ಶಿಫಾರಸ್ಸು ಮಾಡಿದ್ದರು. ಆದರೆ, ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಸರ್ಕಾರ ಮೋಡ ಬಿತ್ತನೆಗೆ ಮುಂದಾಗಿರುವುದು ವ್ಯಾಪಕ ಚರ್ಚೆಗೊಳಪಟ್ಟಿದೆ.
ಮಾಜಿ ಸಚಿವ ಟಿ ಬಿ ಜಯಚಂದ್ರ ಅವರು ಸಾರ್ವಜನಿಕ ಲೆಕ್ಕ ಪತ್ರಗಳ ಸಮಿತಿ ಅಧ್ಯಕ್ಷರಾಗಿದ್ದಾಗ ಯಾವ ಕಾರಣಕ್ಕೂ ಮೋಡ ಬಿತ್ತನೆ ಕಾರ್ಯ ನಡೆಸುವುದು ಬೇಡ ಎಂದು ಶಿಫಾರಸು ಮಾಡಿದ್ದರು. ಮೋಡ ಬಿತ್ತನೆ ಕಾರ್ಯದಿಂದ ಮಳೆ ಬರುತ್ತೆ ಎನ್ನುವುದು ಸಾಬೀತಾಗಿಲ್ಲ. ಅಮೆರಿಕಾ ಸೇರಿ ಹಲವು ದೇಶಗಳು ಇದನ್ನು ಪುಷ್ಠೀಕರಿಸಿವೆ. ಮೋಡ ಬಿತ್ತನೆ ಎಂಬುದು ಒಂದು ಪ್ರಯತ್ನವೇ ಹೊರತು ಬೇರೇನೂ ಅಲ್ಲ. ಅದರಿಂದ ಯಾವ ಲಾಭವೂ ಇಲ್ಲ. ಇದು ವೈಜ್ಞಾನಿಕವಾಗಿ ಸಾಬೀತಾಗಿದೆ. ಹೀಗಿರುವಾಗ ಮೋಡ ಬಿತ್ತನೆ ಕಾರ್ಯವನ್ನು ಇನ್ಮುಂದೆ ಕೈಗೆತ್ತಿಕೊಳ್ಳುವುದು ಬೇಡ ಎಂದು ಟಿ ಬಿ ಜಯಚಂದ್ರ ಹೇಳಿದ್ದರು.
ಆದರೆ, ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಇದೀಗ ಮೋಡ ಬಿತ್ತನೆ ಕಾರ್ಯಕ್ಕೆ ಎರಡು ವರ್ಷಗಳ ಟೆಂಡರ್ ಕರೆದು ಖಾಸಗಿಯವರಿಗೆ ವಹಿಸಿದೆ. ಇದಕ್ಕಾಗಿ ಸುಮಾರು 91 ಕೋಟಿ ರೂ. ತೆಗೆದಿರಿಸಿದೆ. ಈ ವರ್ಷ ಮಳೆ ಬರುವುದಿಲ್ಲ ಎಂದು ಯಾವ ಹವಾಮಾನ ಇಲಾಖೆಯೂ ಎಲ್ಲೂ ಹೇಳಿಲ್ಲ. ವಾರ್ಷಿಕವಾಗಿ ಮಳೆ ಬರುವುದು ಬಹುತೇಕ ಗ್ಯಾರಂಟಿ. ಹೀಗಿರುವಾಗ ಮೋಡ ಬಿತ್ತನೆ ಕಾರ್ಯಕ್ಕೆ ಕೈ ಹಾಕುವ ಔಚಿತ್ಯವೇ ಇಲ್ಲ. ಹಾಗೆಯೇ ಮುಂದಿನ ವರ್ಷ ಮಳೆ ಬರುವುದಿಲ್ಲ ಎಂದು ಈಗಲೇ ಯಾವ ಆಧಾರದ ಮೇಲೆ ತೀರ್ಮಾನಕ್ಕೆ ಬರಲಾಗಿದೆ ಎನ್ನುವುದು ಹಲವು ನಾಯಕರ ವಾದ.
ಎಲ್ಲದಕ್ಕಿಂತ ಮುಖ್ಯವಾಗಿ ಮೋಡ ಬಿತ್ತನೆ ಕಾರ್ಯಕ್ಕೆ ಹೆಚ್ಚೆಂದರೆ ಐದಾರು ಕೋಟಿ ರೂ. ವ್ಯಯವಾಗುತ್ತದೆ. ಆದರೆ, ಎರಡು ವರ್ಷಗಳ ಅವಧಿಗೆ ಮೋಡ ಬಿತ್ತನೆ ಮಾಡಲು 91 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಅಂದರೆ ವಾರ್ಷಿಕ 40 ಕೋಟಿ ರೂ.ಗಳಷ್ಟು ಹಣ ವಿನಾಕಾರಣ ಪೋಲಾಗುತ್ತದೆ. ವಾಡಿಕೆಯಂತೆ ಮಳೆ ಬಂದರೆ ಇದು ಮೋಡ ಬಿತ್ತನೆಯ ಪರಿಣಾಮ ಎನ್ನಬಹುದು. ಆಗದೆ ಇದ್ದರೆ ಸತತ ಯತ್ನ ನಡೆಸಿದರೂ ಫಲ ಸಿಗುತ್ತಿಲ್ಲ ಎಂದು ಕೈ ಎತ್ತುವುದು. ಇದು ಸಾರ್ವಜನಿಕರ ಹಣವನ್ನು ಹೇಗೆ ಪೋಲು ಮಾಡಲಾಗುತ್ತಿದೆ ಎಂಬುದಕ್ಕೆ ಸಾಕ್ಷಿ. ಹೀಗಾಗಿ ಯಾರ ಉಪಕಾರಕ್ಕಾಗಿ ಈ ಮೋಡ ಬಿತ್ತನೆಗೆ ಅವಕಾಶ ಕಲ್ಪಿಸಲಾಗಿದೆ ಎಂಬ ವಾದ ದಿನೇದಿನೇ ಗಟ್ಟಿಯಾಗುತ್ತಿದೆ.