ಬೆಂಗಳೂರು:ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣದ ರೂವಾರಿ ಮಾಜಿ ಮೇಯರ್ ಸಂಪತ್ ರಾಜ್ ಎಂದು ಸಿಸಿಬಿ ಅವರ ಮೇಲೆ ಚಾರ್ಜ್ ಶೀಟ್ ಸಲ್ಲಿಸಿದ ಮೇಲೂ ಬಂಧಿಸದಂತೆ ಒತ್ತಡ ಹೇರಿದ್ದ ಡಿ.ಕೆ.ಶಿವಕುಮಾರ್ ಅವರೇ ಈ ಘಟನೆಯ ಹೊಣೆ ಹೊರಬೇಕು. ರಾಜಕೀಯ ಒತ್ತಡಕ್ಕೆ ಸಮಾಜ ಘಾತುಕ ವ್ಯಕ್ತಿಯನ್ನು ರಕ್ಷಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸ್ಪಷ್ಟನೆ ನೀಡಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಆಗ್ರಹಿಸಿದರು.
ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಸುಮಾರು 250 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದ್ದು, ಕೋಮು ದ್ವೇಷ ಹಚ್ಚಿ ಜನರನ್ನು ಎತ್ತಿಕಟ್ಟಿದ ಈ ವ್ಯಕ್ತಿಯನ್ನು ಬಂಧಿಸದೇ ಇರಲು ಕಾರಣ ಡಿ.ಕೆ.ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸ್ನೇಹವೇ ಕಾರಣ. ರಾಷ್ಟ್ರೀಯ ಪಕ್ಷದ ಸಾರರ್ಥ್ಯ ವಹಿಸಿರುವ ಡಿ.ಕೆ.ಶಿವಕುಮಾರ್ ಅವರೇ ಈ ಕೂಡಲೇ ನಿಮ್ಮ ಶಿಷ್ಯನಿಗೆ ಶರಣಾಗುವಂತೆ ಸೂಚಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 20 ದಿನಗಳ ಹಿಂದೆ ಆಮ್ ಆದ್ಮಿ ಪಕ್ಷದಿಂದ ಆರೋಪಿ ಸಂಪತ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಪತ್ರಿಕಾಗೋಷ್ಠಿ ಮಾಡಲಾಗಿತ್ತು. ಆದರೂ ಸರ್ಕಾರ ಯಾವುದೇ ಉತ್ತರ ನೀಡದೆ ಬೇಜವಬ್ದಾರಿಯಿಂದ ವರ್ತಿಸಿತ್ತು. ಕೇವಲ ಎಂಎಲ್‌ಎ ಸೀಟಿನ ಆಸೆಗಾಗಿ ಹಾಲಿ ಶಾಸಕ ಅಖಂಡ ಶ್ರೀನಿವಾಸ್ ಅವರ ಮನೆಯನ್ನೆ ಸುಡುವಷ್ಟರ ಹಾಗೂ ಅವರ ಕುಟುಂಬದವರನ್ನು ಸಾಯಿಸುವ ಮಟ್ಟಕ್ಕೆ ಹೋದ ಈ ನೀಚ ವ್ಯಕ್ತಿ ತಪ್ಪಿಸಿಕೊಳ್ಳಲು ಪೊಲೀಸ್ ವ್ಯವಸ್ಥೆ, ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಸಚಿವ ಬೊಮ್ಮಾಯಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇವರೇ ನೇರ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.