ಬೆಂಗಳೂರು:ಚುನಾವಣೆ ವೇಳೆ ರಾಜ್ಯದ ಜನತೆಗೆ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿ ಯೋಜನೆಗಳ ಜಾರಿಗೆ ಯಾವುದೇ ಕಾರಣಕ್ಕೂ ವಿಶೇಷ ಘಟಕ ಯೋಜನೆ/ಬುಡಕಟ್ಟು ಉಪ ಯೋಜನೆ (ಎಸ್ಸಿಪಿ/ಟಿಎಸ್ಪಿ) ಹಣ ಬಳಕೆ ಮಾಡಬಾರದು ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಆಗ್ರಹಿಸಿದ್ದಾರೆ. ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೇಗಾದರೂ ಮಾಡಿ ಅಧಿಕಾರ ಹಿಡಿಯಬೇಕು ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ನಾಡಿನ ಜನತೆಗೆ ಐದು ಭರವಸೆ ನೀಡಿ ರಾಜ್ಯದ ಜನತೆಗೆ ಮೋಸ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ ಎಂದು ಆರೋಪಿಸಿದರು.
ಆವತ್ತೇ ಗ್ಯಾರಂಟಿ ಕಾರ್ಡ್ ಜೋಪಾನವಾಗಿ ಇಟ್ಟುಕೊಳ್ಳಬೇಕು ಅಂತಾ ಹೇಳಿದ್ದರು. ಪಕ್ಷ ಅಧಿಕಾರಕ್ಕೆ ಬಂದಾಗ ಮೊದಲ ಕ್ಯಾಬಿನೆಟ್ ಸಭೆಯಲ್ಲೇ ಘೋಷಣೆ ಮಾಡುತ್ತೇವೆ ಎಂದಿದ್ದರು. ಆದರೆ, ಜನರಿಗೆ ಕಾಂಗ್ರೆಸ್ ಮೋಸ ಮಾಡಿದೆ. ಮೊದಲ ಕ್ಯಾಬಿನೆಟ್ನಲ್ಲಿಯೇ ಘೋಷಣೆ ಮಾಡಬಹುದಿತ್ತಲ್ವಾ? ಯಾಕೆ ಘೋಷಣೆ ಮಾಡಿಲ್ಲ? ಎಂದು ಪ್ರಶ್ನಿಸಿದರು.
ಮೊದಲು 60 ವರ್ಷಗಳ ಕಾಲ ದೇಶದ ಜನರಿಗೆ ಮೋಸ ಮಾಡಿದರು. ಗರೀಬಿ ಹಟಾವೋ ಮಾಡುತ್ತೇವೆ ಅಂತ ಹೇಳಿ ಈವರೆಗೂ ಮಾಡಿಲ್ಲ. ಈಗ ಉಚಿತ ಭರವಸೆಗಳ ನೀಡಿದ್ದಾರೆ. ಅಂದು ಪ್ರತಿ ಮಹಿಳೆಗೆ 2 ಸಾವಿರ ರೂಪಾಯಿ ಅಂತ ಹೇಳಿದ್ದರು. ಆದರೆ, ಇವತ್ತು ಅತ್ತೆಗೆ ಮಾತ್ರ 2 ಸಾವಿರ ರೂಪಾಯಿ ಕೊಡುತ್ತೇವೆ ಅಂತ ಹೇಳ್ತಾರೆ. ಯಾವುದೇ ಕಂಡೀಷನ್ ಇಲ್ಲದೇ ಪ್ರತಿ ಕುಟುಂಬದ ಯಜಮಾನಿಗೆ 2 ರೂಪಾಯಿ ಕೊಡಲೇಬೇಕು.
ಯುವ ನಿಧಿಯಲ್ಲಿ 2022 ಹಾಗೂ 23ರಲ್ಲಿ ಪಾಸಾದವರಿಗೆ ಮಾತ್ರವೇ ಹಣ ಸಿಗಲಿದೆ ಅಂತಾರೆ. ಪ್ರತಿಯೊಬ್ಬ ಪಾಸ್ ಆದ ಪದವೀಧರರು ಹಾಗೂ ಡಿಪ್ಲೋಮಾ ಪದವಿದಾರರಿಗೂ ಹಣ ಕೊಡಲೇಬೇಕು. ಸರಿ ಸುಮಾರು 60 ಲಕ್ಷ ಪದವೀಧರರು ಇದ್ದಾರೆ. ಎಲ್ಲರಿಗೂ ಕೊಡಬೇಕು. ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಎಂದು ಹೇಳಿ ಈಗ ಈಗ ಷರತ್ತು ಎನ್ನುತ್ತಿದ್ದಾರೆ ಎಂದು ಟೀಕಿಸಿದರು.