ಬೆಂಗಳೂರು:ದಸರಾ ಮಹೋತ್ಸವದ ರಂಗು ಹೆಚ್ಚಿಸಲು ದೇಶದ ಮೂಲೆ ಮೂಲೆಗಳಿಂದ ಬೆಂಗಳೂರಿಗೆ ಬಂದಿದ್ದ 50ಕ್ಕೂ ಹೆಚ್ಚು ವಿಂಟೇಜ್ ಕಾರುಗಳು ಬೆಂಗಳೂರಿನಿಂದ ಮೈಸೂರಿಗೆ ಪಯಣ ಬೆಳೆಸಿವೆ. ರಾಜ್ಯಪಾಲ ವಜುಭಾಯ್ ವಾಲಾ ವಿಂಟೇಜ್ ಕಾರುಗಳ ಪಯಣಕ್ಕೆ ವಿದ್ಯುಕ್ತ ಚಾಲನೆ ನೀಡಿದರು.
ರಾಯಲ್ ದಸರೆಗೆ ಹೊರಟ ಐತಿಹಾಸಿಕ ವಿಂಟೇಜ್ ಕಾರುಗಳು - ಮೈಸೂರು ದಸರಾ
ನಾಡ ಹಬ್ಬ ದಸರಾದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಬಂದಿದ್ದ 50ಕ್ಕೂ ಹೆಚ್ಚು ಕಾರುಗಳು ಮೈಸೂರಿನತ್ತ ಪ್ರಯಾಣ ಬೆಳೆಸಿವೆ.
ನಾಡಹಬ್ಬ ದಸರಾ ಉತ್ಸವಕ್ಕೆ ತೆರಳುತ್ತಿರುವ ಐತಿಹಾಸಿಕ ಹಿನ್ನೆಲೆಯುಳ್ಳ ಈ ಕಾರುಗಳು ಹಲವು ವರ್ಷಗಳಿಂದ ದಸರಾ ಹಬ್ಬದಲ್ಲಿ ಪಾಲ್ಗೊಳ್ಳುತ್ತಿವೆ. ಈ ವರ್ಷವೂ ಸಹ ದಸರಾ ಮಹೋತ್ಸವಕ್ಕೆ ಮೆರುಗು ತುಂಬಲು ತಮ್ಮ ಮಾಲೀಕರೊಂದಿಗೆ ಈ ಕಾರುಗಳು ಪಾರಂಪರಿಕ ನಗರಿಗೆ ತೆರಳಿದವು. ದೇಶದ ವಿವಿಧ ರಾಜ್ಯಗಳೂ ಸೇರಿದಂತೆ ನೆರೆಯ ಶ್ರೀಲಂಕಾದಿಂದಲೂ ನೂರಾರು ವರ್ಷಗಳ ಇತಿಹಾಸವಿರುವ ಕಾರುಗಳು ದಸರೆಗೆ ಆಗಮಿಸಿವೆ. ಈ ಕಾರುಗಳ ವೈಶಿಷ್ಟ್ಯವನ್ನು ತಿಳಿದು ಸ್ವತಃ ರಾಜ್ಯಪಾಲರೇ ಕಾರಿನಲ್ಲಿ ಕುಳಿತು ರಾಜಭವನದ ಸುತ್ತಾ ಒಂದು ಸುತ್ತು ಹಾಕಿದರು.
ಕೇವಲ ಕಾರುಗಳಷ್ಟೇ ಅಲ್ಲ, ಹಳೇ ಕಾಲದ ರಾಯಲ್ ಎನ್ಫೀಲ್ಡ್ ಸೇರಿದಂತೆ ವಿವಿಧ ಕಂಪನಿಯ ಬೈಕುಗಳೂ ಕೂಡಾ ಇಲ್ಲಿ ಕಂಡುಬಂದವು. ರಾಜಭವನದಿಂದ ತೆರಳಿದ ಈ ಕಾರು, ಬೈಕುಗಳು ನೇರವಾಗಿ ವಿಧಾನಸೌಧಕ್ಕೆ ಹೋಗಿ, ಅಲ್ಲಿಂದ ಮೈಸೂರಿಗೆ ತಲುಪಿವೆ. ರಾಷ್ಟ್ರಕವಿ ಕುವೆಂಪು ಅವರ ಹಳೆಯ ಕಾರು ಇಲ್ಲಿ ವಿಶೇಷವಾಗಿ ಗಮನ ಸೆಳೆಯಿತು.