ಬೆಂಗಳೂರು: ಸರ್.ಎಂ.ವಿಶ್ವೇಶ್ವರಯ್ಯನವರು ಭಾರತದ ಮಹಾನ್ ಇಂಜಿನಿಯರ್‌ಗಳಲ್ಲಿ ಒಬ್ಬರು. ಆಧುನಿಕ ಭಾರತದ ನಿರ್ಮಾಣದಲ್ಲಿ ಅವರು ಮಹತ್ವದ ಕೊಡುಗೆ ನೀಡಿದ್ದಾರೆ. ದೇಶದ ಅಭಿವೃದ್ಧಿಗೆ ನೀಡಿದ ಕೊಡುಗೆಗಾಗಿ ಭಾರತದ ಅತ್ಯುನ್ನತ ಗೌರವ ಭಾರತ ರತ್ನ ನೀಡಿ ಗೌರವಿಸಲಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದರು. ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಇಂದು ಆಯೋಜಿಸಿದ್ದ ಸಂಸ್ಥಾಪಕರ ದಿನಾಚರಣೆ ಮತ್ತು ಸರ್.ಎಂ.ವಿಶ್ವೇಶ್ವರಯ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸೆಪ್ಟೆಂಬರ್ 15 ದೇಶದ ಮಹಾನ್ ಇಂಜಿನಿಯರ್ ಮತ್ತು ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನ. ದೇಶಕ್ಕಾಗಿ ವಿಶ್ವೇಶ್ವರಯ್ಯನವರು ಮಾಡಿದ ಮಹತ್ತರ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಲು, ಭಾರತ ಸರ್ಕಾರವು 1968 ರಲ್ಲಿ ಅವರ ಜನ್ಮದಿನವನ್ನು ಇಂಜಿನಿಯರ್ ದಿನವನ್ನಾಗಿ ಆಚರಿಸಲು ಘೋಷಿಸಿತು. ಅಂದಿನಿಂದ ಪ್ರತಿ ವರ್ಷ ಸೆಪ್ಟೆಂಬರ್ 15 ಅನ್ನು ಇಂಜಿನಿಯರ್ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ರಾಜ್ಯದ ವಿವಿಧ ಕೈಗಾರಿಕೆಗಳ ಅಭಿವೃದ್ಧಿ ಮತ್ತು ವಿಸ್ತರಣೆಯಲ್ಲಿ ವಿಶ್ವೇಶ್ವರಯ್ಯ ಅವರ ಕೊಡುಗೆ ಅನುಪಮವಾಗಿದೆ. ರಾಜ್ಯದಲ್ಲಿ ರೈಲ್ವೆ ಜಾಲದ ವಿಸ್ತರಣೆ, ಅತಿದೊಡ್ಡ ನೀರಾವರಿ ಜಲಾಶಯವಾಗಿದ್ದ ಕೃಷ್ಣರಾಜ್ ಸಾಗರ ಜಲಾಶಯದ ನಿರ್ಮಾಣವನ್ನು ಸೇರಿದಂತೆ ಅನೇಕ ಮಹತ್ತರ ಕೊಡುಗೆಗಳನ್ನು ನೀಡಿದ್ದಾರೆ. ವಿಶ್ವೇಶ್ವರಯ್ಯ ಅವರು ದೂರ ದೃಷ್ಠಿಕೋನ ಹೊಂದಿದ್ದರು. ದೇಶ ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಬೇಕು ಎಂಬ ಸಮಾಜದ ಕಳಕಳಿ ಅವರಲ್ಲಿತ್ತು. ಇಂತಹ ಭಾರತ ರತ್ನರ ಕನಸನ್ನು ನನಸಾಗಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬ ಇಂಜಿನಿಯರ್ಗೂ ವಿಶ್ವೇಶ್ವರಯ್ಯನವರು ಮಾರ್ಗದರ್ಶಿಗಳು. ದೇಶದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡುವ ಮೂಲಕ ನಮಗೆಲ್ಲರಿಗೂ ಆದರ್ಶವಾಗಿದ್ದಾರೆ ಎಂದು ತಿಳಿಸಿದರು.