ಬೆಂಗಳೂರು : ಹಸಿದವರಿಗೆ ಅನ್ನ ನೀಡಿದ ಅತ್ಯಂತ ಜನಸ್ನೇಹಿ ಸರ್ಕಾರ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿ, ಮುಂದಿನ ಐದು ವರ್ಷಗಳಲ್ಲಿ ಸರ್ಕಾರ ಬುದ್ದ, ಬಸವ, ಅಂಬೇಡ್ಕರ್, ನಾರಾಯಣಗುರು ಮತ್ತು ಕುವೆಂಪು ಕನಸಿನ ಸಮಾಜವನ್ನು ನಿರ್ಮಿಸಲಿದೆ ಎಂದು ಭರವಸೆ ನೀಡಿದ್ದಾರೆ.
ವಿಧಾನಸೌಧದ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ತಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಶಕ್ತಿಯೋಜನೆ, ಗೃಹಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ ಮತ್ತು ಅನ್ನಭಾಗ್ಯ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿ ಸಂಪತ್ತಿನಲ್ಲಿ ಎಲ್ಲರಿಗೂ ಸಮಾನ ಪಾಲು ನೀಡುವುದು ಸರ್ಕಾರದ ಗುರಿ ಎಂದಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ಅಕ್ಕಿ ನೀಡಲು ಸರ್ಕಾರ ಬದ್ಧವಾಗಿದೆ. ಈ ಯೋಜನೆಯಡಿ ಈಗ ಅಕ್ಕಿಯ ಬದಲು ಹಣ ನೀಡುತ್ತಿದ್ದರೂ ಯೋಜನೆಯನ್ನು ಪರಿಪೂರ್ಣವಾಗಿ ಜಾರಿಗೆ ತಂದೇ ತರುತ್ತೇವೆ ಎಂದು ಹೇಳಿದರು.
ಭ್ರಷ್ಟಾಚಾರ ತೊಡೆದು ಹಾಕಬೇಕು :ನಾವು ಜನರಿಗೆ ಅವರಿಂದಲೇ ಸೃಷ್ಟಿಯಾದ ಸಂಪತ್ತಿನಲ್ಲಿ ಒಂದು ಪಾಲನ್ನು ಕೊಡುವ ಕೆಲಸವನ್ನು ಮಾಡುತ್ತಿದ್ದೇವೆಯೇ ಹೊರತು ಯಾವುದೇ ದುರುದ್ದೇಶ ಹೊಂದಿಲ್ಲ. ಹಲವು ಕಾರಣಗಳಿಂದ ನಮ್ಮ ವ್ಯವಸ್ಥೆಯೊಳಗೆ ಭ್ರಷ್ಟಾಚಾರ ಸಾಂಸ್ಥೀಕರಣಗೊಳ್ಳುವ ಮಟ್ಟಕ್ಕೆ ಬೇರು ಬಿಟ್ಟಿದೆ. ಇದನ್ನು ತೊಡೆದು ಹಾಕುವುದು ಒಂದು ದೊಡ್ಡ ಸವಾಲು. ಈ ಸವಾಲನ್ನು ಎದುರಿಸಲು ಎಲ್ಲರ ಸಹಕಾರದ ಅಗತ್ಯವಿದೆ. ಈ ನಿಟ್ಟಿನಲ್ಲಿ ಅಗತ್ಯವಿರುವ ಆಡಳಿತಾತ್ಮಕ, ಶಾಸನಾತ್ಮಕ ಕ್ರಮಗಳನ್ನು ತಮ್ಮ ಸರ್ಕಾರ ಕೈಗೊಳ್ಳಲಿದೆ ಎಂದು ರಾಜ್ಯಪಾಲರು ಸ್ಪಷ್ಷಪಡಿಸಿದರು.
ಬಡವರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರ ಪರವಾಗಿ ನಿಲ್ಲಲು ಎಲ್ಲ ಜಾತಿ, ಧರ್ಮ ಮತ್ತು ಪಂಗಡಗಳ ಜನರು ತಮ್ಮ ಪಾಲನ್ನು ನ್ಯಾಯಯುತವಾಗಿ ಪಡೆಯಲು ಈ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಸಮಾಜದ ಸಾಮರಸ್ಯವನ್ನು ಕದಡುವ ಗುಣವುಳ್ಳ ಬೆರಳೆಣಿಕೆಯ ಜನರ ದುಷ್ಟ ಚಿಂತನೆಗಳು ಈಗ ತಲೆ ಎತ್ತುತ್ತಿವೆ. ಭಿನ್ನ ಸಂಸ್ಕೃತಿಗಳ ಜನರು ಒಂದುಗೂಡಿ ಬದುಕುವುದೇ ಕರ್ನಾಟಕದ ತತ್ವ ಎಂಬುದನ್ನು ಸಾವಿರಕ್ಕೂ ಹೆಚ್ಚು ವರ್ಷಗಳಿಂದ ಈ ನೆಲ ಪೊರೆಯುತ್ತಾ ಬಂದಿದೆ ಎಂದು ಥಾವರ್ ಚಂದ್ ಗೆಹ್ಲೋಟ್ ವಿವರಿಸಿದರು.
ಸಾಮರಸ್ಯದ ವಾತಾವರಣದಲ್ಲಿ ಮಕ್ಕಳ ಬೆಳವಣಿಗೆ : ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ತರಗತಿಗಳಲ್ಲಿ ನುರಿತ ಪ್ರಾದ್ಯಾಪಕರಂತೆಯೇ ಸ್ಥಳೀಯ ಜ್ಞಾನದ ಪರ್ವತಗಳಾಗಿರುವ ರೈತರು, ಕುಶಲಕರ್ಮಿಗಳು ಮತ್ತು ವಿವಿಧ ಕ್ಷೇತ್ರಗಳ ತಜ್ಞರು ಪಾಲ್ಗೊಳ್ಳುವುದು ಅಗತ್ಯ. ಇದಕ್ಕಾಗಿ ಬೇಕಾದ ಆಡಳಿತಾತ್ಮಕ ಚೌಕಟ್ಟುಗಳನ್ನು ಸರ್ಕಾರ ರೂಪಿಸಿ ಅನುಷ್ಟಾನಗೊಳಿಸಲಿದೆ.
ಬುದ್ಧಿ ಮತ್ತು ಕರುಣೆಗಳು ಸೇರಿದ ಸಮಗ್ರ ಶಿಕ್ಷಣವನ್ನು ರೂಪಿಸಲು ಬೇಕಾದ ವ್ಯವಸ್ಥೆಯನ್ನು ರಚಿಸುವ ಮೂಲಕ ನಿರ್ಭೀತ, ಮುಕ್ತ, ಉದಾರ, ವೈಚಾರಿಕ ಮತ್ತು ವೈಜ್ಞಾನಿಕವೂ ಆದ ತಜ್ಞರು, ಚಿಂತನಶೀಲ ಜನರು, ಬುದ್ಧಿವಂತರು ಪೂರ್ಣ ಪ್ರಮಾಣದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಭಾಗವಹಿಸುವ ವ್ಯವಸ್ಥೆಯನ್ನು ನಿರ್ಮಾಣ ಮಾಡಲಾಗುವುದು. ಅತ್ಯುತ್ತಮವಾದ ಉನ್ನತ ಶಿಕ್ಷಣವನ್ನು ರೂಪಿಸಲು ನಾವು ಸಿದ್ಧರಾಗಿದ್ದೇವೆ. ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಸಾಮರಸ್ಯದ ವಾತಾವರಣದಲ್ಲಿ ನಮ್ಮ ಮಕ್ಕಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ನಾಗರೀಕ ಸ್ನೇಹಿ ವ್ಯವಸ್ಥೆ : ದುಡಿಯುವ ವರ್ಗದ ಕಾರ್ಮಿಕರು, ಹಿರಿಯ ನಾಯಕರು, ವಿಶೇಷ ಚೇತನರು ಸೇರಿದಂತೆ ಎಲ್ಲ ವರ್ಗಗಳ ಕಲ್ಯಾಣವನ್ನು ಕೈಗೆತ್ತಿಕೊಳ್ಳುತ್ತೇವೆ. ಎಲ್ಲರಿಗೂ ಅತ್ಯುತ್ತಮ ಆರೋಗ್ಯ ವ್ಯವಸ್ಥೆಯನ್ನು ನೀಡಬೇಕೆಂಬ ಮಹತ್ತರ ಗುರಿಯನ್ನು ನಿಗದಿಪಡಿಸಿಕೊಂಡಿದ್ದೇವೆ. ಅಸ್ತಿತ್ವದಲ್ಲಿರುವ ಸಾಂಸ್ಥಿಕ ಮೂಲ ಸೌಕರ್ಯವನ್ನು ಸುಧಾರಿಸಿ ನಾಗರೀಕ ಸ್ನೇಹಿಯಾದ ವ್ಯವಸ್ಥೆಯನ್ನು ಜಾರಿಗೊಳಿಸುವುದಾಗಿ ರಾಜ್ಯಪಾಲ ಹೇಳಿದರು.