ಬೆಂಗಳೂರು: 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಆಯುಷ್ಯ ಇಲಾಖೆಯಿಂದ ಇಂದು ವಿಧಾನಸೌಧದ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ "ಯೋಗ-ವಸುದೈವ ಕುಟುಂಬಕ್ಕಾಗಿ" ಕಾರ್ಯಕ್ರಮವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಿದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಮಾತನಾಡಿದ ರಾಜ್ಯಪಾಲರು ಯೋಗದ ಮಹತ್ವವನ್ನ ತಿಳಿಸಿದರು. "ನಮ್ಮ ಸಂಸ್ಕೃತಿಯಲ್ಲಿ ಯೋಗಕ್ಕೆ ತನ್ನದೇ ಆದ ಹೆಸರಿದೆ. ಯೋಗದ ಮಹತ್ವ ಕುರಿತು ನಮ್ಮ ಹಳೆ ಗ್ರಂಥಗಳಲ್ಲಿ ಉಲ್ಲೇಖವಿದೆ. ಯೋಗಭ್ಯಾಸದಿಂದ ಭೌತಿಕ ಹಾಗೂ ಮಾನಸಿಕ ಆರೋಗ್ಯ ಸುಧಾರಣೆ ಆಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ದಿನದ ಆಚರಣೆ ಬಗ್ಗೆ ವಿಶ್ವಸಂಸ್ಥೆ ಬಳಿ ಪ್ರಸ್ತಾಪ ಮಾಡಿದ್ದು, ಅದಕ್ಕೆ ಒಪ್ಪಿ ಇಂದು ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತಿದೆ" ಎಂದು ಹೇಳಿದರು.
"ಜನರನ್ನು ದೇಶ-ಭಾಷೆ ಮೀರಿ ಸಂಪರ್ಕಿಸುವ ಮತ್ತು ಆರೋಗ್ಯ ಸಮಾಜ ಕಟ್ಟುವ ಶಕ್ತಿ ಯೋಗಕ್ಕೆ ಇದೆ. ದೇಹ, ಮನಸ್ಸು ಮತ್ತು ಭಾವನೆಗಳನ್ನು ಸಮತೋಲನಗೊಳಿಸಲು ಯೋಗ ಉತ್ತಮ ಮಾರ್ಗವಾಗಿದೆ. ಇಂದು ಪ್ರಪಂಚಾದ್ಯಂತ ಜನರು ತಮ್ಮ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಯೋಗಾಸನದ ಅಭ್ಯಾಸದ ಮೂಲಕ, ನಾವು ಆರೋಗ್ಯಕರ ಮನಸ್ಸು ಮತ್ತು ದೇಹವನ್ನು ಪಡೆಯಬಹುದು. ಯೋಗದ ಈ ಉಪಯುಕ್ತತೆಯ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿ ವರ್ಷ ಯೋಗ ದಿನವನ್ನು ಆಚರಿಸಲಾಗುತ್ತದೆ" ಎಂದು ಹೇಳಿದರು.
"2014 ರಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಯೋಗವನ್ನು ಅಳವಡಿಸಿಕೊಳ್ಳುವಂತೆ ವಿಶ್ವದ ಎಲ್ಲಾ ದೇಶಗಳಿಗೆ ಕರೆ ನೀಡಿದರು ಮತ್ತು ಪ್ರತಿ ವರ್ಷ ಜೂನ್ 21 ರಂದು ಯೋಗ ದಿನವನ್ನು 172 ಕ್ಕೂ ಹೆಚ್ಚು ದೇಶಗಳು ಆಚರಿಸುತ್ತಿವೆ. ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನದ ಥೀಮ್ "ವಸುಧೈವ ಕುಟುಂಬಕ್ಕಾಗಿ ಯೋಗ". ಇದು ನಮ್ಮ ಭಾತೃತ್ವ ಮತ್ತು ವಿಶ್ವ ಸಹೋದರತ್ವದ ನಡವಳಿಕೆಯನ್ನು ಪ್ರತಿಬಿಂಬಿಸುತ್ತದೆ. ಕರ್ನಾಟಕ ರಾಜ್ಯದಲ್ಲಿ ಜನವರಿ 15, 2023 ರಂದು 26 ನೇ ರಾಷ್ಟ್ರೀಯ ಯುವಜನೋತ್ಸವವನ್ನು ಆಯೋಜಿಸುವ ಸಂದರ್ಭದಲ್ಲಿ, ದೊಡ್ಡ ಪ್ರಮಾಣದ ಯೋಗವನ್ನು ಆಯೋಜಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಕ್ಕಾಗಿ ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ" ಎಂದರು.
ಈ ಸಂದರ್ಭದಲ್ಲಿ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಶಾಸಕರುಗಳಾದ ರಿಜ್ವಾನ್ ಅರ್ಷದ್, ಶರವಣನ್, ಕ್ರೀಡಾಪಟುಗಳಾದ ವೆಂಕಟೇಶ್ ಪ್ರಸಾದ್, ಅಂಜು ಬಿ ಜಾರ್ಜ್, ನಟಿ ಭಾವನ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರಾಜ್ಯಪಾಲರು ಸೇರಿದಂತೆ ಎಲ್ಲ ಗಣ್ಯರು ಯೋಗಾಸನ ಮಾಡಿದರು. ನಂತರ, ನುರಿತ ಯೋಗಪಟುಗಳು ಯೋಗ ಪ್ರದರ್ಶನ ನೀಡಿದರು.