ಬೆಂಗಳೂರು :ಕ್ವಿಟ್ ಇಂಡಿಯಾ ಚಳವಳಿ ವರ್ಷಾಚರಣೆ ಅಂಗವಾಗಿ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಪ್ರಯುಕ್ತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸ್ವಾತಂತ್ರ್ಯಹೋರಾಟಗಾರರ ಮನೆಗೆ ಖುದ್ದಾಗಿ ಭೇಟಿ ನೀಡಿ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಯಾನಂದ್ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಇಂದು ಬೆಳಗ್ಗೆ ಬಸವನಗುಡಿಯಲ್ಲಿರುವ ಶ್ರೀಸಾಯಿ ವೃದ್ಧಾಶ್ರಮದಲ್ಲಿ ವಾಸಿಸುತ್ತಿರುವ ಶಕುಂತಲ ಅವರನ್ನು ರಾಜ್ಯಪಾಲರು ಭೇಟಿ ಮಾಡಿದರು. ಬಳಿಕ ಅವರನ್ನು ಸನ್ಮಾನಿಸಿ, ಪ್ರಮಾಣಪತ್ರ, ಸಿಹಿ ನೀಡಿ ಗೌರವಿಸಿದರು. ನಂತರ ಯಲಚೇನಹಳ್ಳಿಯ ನಂಜಪ್ಪ ಲೇಔಟ್ ನಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರಾದ ಎಸ್ವಿಟಿ ಗುಪ್ತಾ ಅವರ ಮನೆಗೆ ತೆರಳಿ ಅವರನ್ನು ಸನ್ಮಾನಿಸಿ ಪ್ರಮಾಣ ಪತ್ರ ನೀಡಿದರು.
ಬಳಿಕ ಬನಶಂಕರಿ 3ನೇ ಹಂತದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರಾದ ಶಂಕರನಾರಾಯಣ ರಾವ್ ಅವರ ಮನೆಗೆ ತೆರಳಿ ಅವರನ್ನು ಸನ್ಮಾನಿಸಿ ಗೌರವಿಸಿದರು. ಬಳಿಕ ಸಿಹಿ ನೀಡಿ ಕುಶಲೋಪರಿ ವಿಚಾರಿಸಿದ ರಾಜ್ಯಪಾಲರು, ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾಗಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟ ತಮಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹೇಳಿದರು.
ನಂತರ ಮಲ್ಲೇಶ್ವರಂನಲ್ಲಿರುವ ನಾಗಭೂಷಣ್ ರಾವ್ ಅವರ ಮನೆಗೆ ತೆರಳಿದ ರಾಜ್ಯಪಾಲರು, ನಾಗಭೂಷಣ್ ರಾವ್ ಅವರನ್ನು ಸನ್ಮಾನಿಸಿದರು. ಬಳಿಕ ರಾಜ್ಯಪಾಲರು "ತಮ್ಮ ದೇಶ ಸೇವೆ ನಮ್ಮೆಲ್ಲರಿಗೆ ಸ್ಫೂರ್ತಿ ಎಂದು ಹೇಳಿದರು. ಭೂಪಸಂದ್ರದ ವಿನಾಯಕ ಲೌಔಟ್ನಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ ಕೆ.ಸಿ ನಾರಾಯಣಪ್ಪ ಅವರನ್ನು ಭೇಟಿ ಮಾಡಿ ಸನ್ಮಾನಿಸಿದರು.