ಬೆಂಗಳೂರು : ಎಂದಿಗೂ ಮಣಿಯದ ಮಾನವ ಚೈತನ್ಯ ಶಕ್ತಿಗೆ ಈ ಗಣರಾಜ್ಯೋತ್ಸವದ ಸಮಾರಂಭವನ್ನು ಅರ್ಪಿಸುತ್ತೇನೆ. ಇದೊಂದು ಶತ್ರುವಿನ ವಿರುದ್ಧ ಪಡೆದ ಜಯವಾಗಿದೆ. 2020ರಲ್ಲಿ ಹಿಂದೆಂದೂ ಕಂಡರಿಯದ ಕೋವಿಡ್-19ರ ಸವಾಲನ್ನು ಜಗತ್ತು ಎದುರಿಸುತ್ತಿರುವಾಗ, ನಾವು ನವ ಚೈತನ್ಯ ಮತ್ತು ಆಶೋತ್ತರದೊಂದಿಗೆ ಹೊಸ ವರ್ಷ 2021ಕ್ಕೆ ಹೆಜ್ಜೆ ಇರಿಸಿದ್ದೇವೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದ್ದಾರೆ.
ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಇಂದು ನಡೆದ 72 ನೇ ಗಣರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಅವರು, ಕರ್ನಾಟಕ ಸರ್ಕಾರವು, ಜನತೆಯ ಸಹಕಾರದೊಂದಿಗೆ ಹಗಲಿರುಳು ಶ್ರಮಿಸಿ ಕೋವಿಡ್-19ರ ಅಲೆಯನ್ನು ತಗ್ಗಿಸುವಲ್ಲಿ ಯಶಸ್ವಿಯಾಗಿದೆ. ಈ ಬಿಕ್ಕಟ್ಟಿನ ಅವಕಾಶವನ್ನು ನಮ್ಮ ಸಾಮರ್ಥ್ಯ ವೃದ್ಧಿಸಲು ಮತ್ತು ಆರೋಗ್ಯ ಮೂಲಸೌಕರ್ಯ ಹಾಗೂ ಪಿ.ಪಿ.ಇ. ಕಿಟ್, ವೆಂಟಿಲೇಟರ್ ಉತ್ಪಾದನೆಯನ್ನು ಹೆಚ್ಚಿಸಲು ಬಳಸಿಕೊಂಡಿದ್ದೇವೆ. ಇದು ಪ್ರಧಾನಿ ನರೇಂದ್ರ ಮೋದಿಯವರು ದೂರದರ್ಶಿತ್ವ "ಆತ್ಮ ನಿರ್ಭರ್ ಭಾರತ್' ಕಾರ್ಯಕ್ರಮದ ದಿಸೆಯಲ್ಲಿ ಒಂದು ಉತ್ತಮ ಹೆಜ್ಜೆಯಾಗಿರುತ್ತದೆ ಎಂದರು.
ಸಾಂಪ್ರದಾಯಿಕ ಗುಜರಾತಿ ಪೇಟ ಧರಿಸಿ, ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದ ರಾಜ್ಯಪಾಲ ವಜುಭಾಯಿ ವಾಲಾ ರಾಜ್ಯದ ಜನರಿಗೆ ಗಣರಾಜ್ಯೋತ್ಸವದ ಶುಭಾಶಯ ಕೋರಿದರು. ಸುಮಾರು 40 ನಿಮಿಷಗಳಲ್ಲಿ ಮುಕ್ತಾಯವಾದ ಕಾರ್ಯಕ್ರಮದಲ್ಲಿ 12 ಪುಟಗಳ ಭಾಷಣವನ್ನು ರಾಜ್ಯಪಾಲರು ಓದಿದರು. ತಮ್ಮ ಭಾಷಣದಲ್ಲಿ ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳನ್ನು ಹೊಗಳುವ ಮೂಲಕ ಸರ್ಕಾರದ ಬೆನ್ನು ತಟ್ಟಿದರು. ಕೋವಿಡ್ ಕೊನೆಯ ಹಂತಕ್ಕೆ ತಲುಪಿದ್ದೇವೆ. ಹಾಗಂತ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ದೈಹಿಕ ಅಂತರ, ಮಾಸ್ಕ್ ಧರಿಸುವುದು, ಸ್ಯಾನಿಟೈಸ್ ಬಳಕೆ ಕಡ್ಡಾಯ ಎಂದು ಸಲಹೆ ನೀಡಿದರು.
ಭಾರತ ಲಸಿಕೆ ಉತ್ಪಾದಿಸುತ್ತದೆ. ಈ ಲಸಿಕೆಗಳನ್ನು ವಿದೇಶಗಳಿಗೂ ಸಹ ರಪ್ತು ಮಾಡುತ್ತಿರುವುದು ಗಮನಾರ್ಹ. ಸಮರ್ಥ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಜನವರಿ 16ರಂದು ಲಸಿಕಾ ಅಭಿಯಾನ ಆರಂಭಿಸಿದರು. ನಾವು ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಪ್ರತಿಯೊಬ್ಬರಿಗೂ ಲಸಿಕೆ ತಲುಪಲು ಕ್ರಮ ವಹಿಸಲಾಗಿದೆ. ಕೊರೊನಾ ನಿರ್ವಹಣೆಗೆ ಶ್ರಮಿಸಿದವರು ಹೀರೋಗಳಾಗಿರುತ್ತಾರೆ. ಅವರಿಗೆಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಪ್ರವಾಹ ನಿರ್ವಹಣೆ ಶ್ರಮಿಸಿದವರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಕೃಷಿ ವಲಯದಲ್ಲಿ ಬದಲಾವಣೆ ತರಲು, ಜಲಾನಯನದ ಕಡೆ ಗಮನ ಹರಿಸಿದ್ದೇವೆ ಎಂದು ತಮ್ಮ ಭಾಷಣದಲ್ಲಿ ರಾಜ್ಯಪಾಲರು ಹೇಳಿದರು.
ಈ ಬಾರಿ ಮಹಿಳಾ ಕೇಂದ್ರಿತ ಬಜೆಟ್ಗೆ ಆದ್ಯತೆ ನೀಡಲಾಗುವುದು. ಅಂಗನವಾಡಿಗಳು, ಸಂತಾನೋತ್ಪತ್ತಿ ಮತ್ತು ಮಹಿಳಾ ಆರೋಗ್ಯ ಕಾರ್ಯಕರ್ತಯರ ಮೂಲಕ ಗರ್ಭಿಣಿ ಮಹಿಳೆಯರಿಗೆ ಸೇವೆ ನೀಡಲು ಪ್ರಯತ್ನ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ 8015 ಕೋಟಿ ಅನುಮೋದಿತ ಮೊತ್ತದಲ್ಲಿ ಕೆರೆಗಳ ಸಂರಕ್ಷಣೆ ಮಾಡಿದ್ದೇವೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಗರದ ರೂಪವನ್ನೇ ಬದಲಾಯಿಸಲಾಗುತ್ತಿದೆ. ಬಿಡದಿಯಲ್ಲಿ 210 ಕೋಟಿ ರೂ. ವೆಚ್ಚದಲ್ಲಿ ತ್ಯಾಜ್ಯದಿಂದ ಇಂಧನ ಎಂಬ ಯೋಜನೆ ಮಾಡಿದ್ದೇವೆ. ಪೊಲೀಸ್ ಪಡೆಯಲ್ಲಿ ಮಹಿಳಾ ಮೀಸಲಾತಿ ಶೇಕಡಾ 25ಕ್ಕೆ ಹೆಚ್ಚಳ ಮಾಡಿದ್ದೇವೆ. ಸಬ್ ಇನ್ಸ್ ಪೆಕ್ಟರ್ ನೇಮಕಾತಿಗೆ ವಯೋಮಿತಿ ಎರಡು ವರ್ಷ ಹೆಚ್ಚಳ ಮಾಡಲಾಗಿದೆ. ಪೊಲೀಸ್ ಗೃಹ 2025 ಯೋಜನೆಗೆ ಚಾಲನೆ ನೀಡಲಾಗಿದೆ. ಅಗ್ನಿಶಾಮಕ ತುರ್ತು ಸೇವೆ ಇಲಾಖೆಯಲ್ಲಿ 1568 ಹುದ್ದೆ ನೇಮಕಕ್ಕೆ ಪ್ರಾರಂಭಿಸಲಾಗಿದೆ.