ಬೆಂಗಳೂರು: ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಅಧ್ಯಾದೇಶ 2022ಗೆ ರಾಜ್ಯಪಾಲರು ಅಂಕಿತ ಹಾಕುವ ಮೂಲಕ ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ ಇದೀಗ ಕಾಯ್ದೆಯಾಗಿ ಜಾರಿಯಾಗಿದೆ. ಆ ಮೂಲಕ ಇನ್ನು ಮುಂದೆ ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಶೇ 17ರಷ್ಟು ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ 7ರಷ್ಟು ಶಿಕ್ಷಣ ಹಾಗೂ ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ಮೀಸಲಾತಿ ಸಿಗಲಿದೆ.
ಸುಗ್ರೀವಾಜ್ಞೆಯಲ್ಲಿ ಸರ್ಕಾರ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳಿಗೆ ಸೇರಿದ ಸದಸ್ಯರಿಗಾಗಿ ಮೀಸಲಾತಿಗಳನ್ನು ಹಚ್ಚಿಸಲು ಅಸಾಧಾರಣ ಸನ್ನಿವೇಶ ಮತ್ತು ವಿಶೇಷ ಪ್ರಕರಣ ಈಡೇರಬೇಕಾಗಿದೆ. ಆದರಿಂದ ಸಂವಿಧಾನದ 15ನೇ ಅನುಚ್ಛೇದದ (4)ನೇ ಖಂಡವು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಯಾವುದೇ ನಾಗರಿಕರ ವರ್ಗಗಳ ಏಳಿಗೆಗಾಗಿ ಯಾವುದೇ ವಿಶೇಷ ಉಪಬಂಧಗಳನ್ನು ಕಲ್ಪಿಸಲು ರಾಜ್ಯವನ್ನು ಸಮರ್ಥಗೊಳಿಸಿರುವ ಬಗ್ಗೆ ಉಲ್ಲೇಖಿಸಲಾಗಿದೆ.
ಸಂವಿಧಾನದ 15ನೇ ಅನುಚ್ಛೇದದ (4) ನೇ ಖಂಡ ಸರ್ಕಾರಿ ಸೇವೆಗಳಲ್ಲಿ ಸಾಕಷ್ಟು ಪ್ರಾತಿನಿಧ್ಯವನ್ನು ಹೊಂದಿಲ್ಲವೆಂದು ರಾಜ್ಯ ಅಭಿಪ್ರಾಯಪಡುವಂಥ ಹಿಂದುಳಿದ ಯಾವುದೇ ನಾಗರಿಕರ ವರ್ಗಗಳ ಪರವಾಗಿ ನೇಮಕಾತಿ ಮತ್ತು ಹುದ್ದೆಗಳಲ್ಲಿ ಮೀಸಲಾತಿಗಾಗಿ ಯಾವುದೇ ಉಪಬಂಧ ಕಲ್ಪಿಸಲು ರಾಜ್ಯಕ್ಕೆ ಅಧಿಕಾರ ನೀಡಿದೆ.
ಶೇ. 50ರ ಮೀಸಲಾತಿ ಪರಿಮಿತಿಯನ್ನು ಮೀರಿ ಇತರ ಹಲವು ರಾಜ್ಯಗಳು ಕಾಲಕಾಲಕ್ಕೆ ಮೀಸಲಾತಿ ಕೋಟಾವನ್ನು ಹೆಚ್ಚಿಸಿದೆ. ಹೀಗಾಗಿ ಕರ್ನಾಟಕ ವಿಧಾನಸಭೆ ಮತ್ತು ಕರ್ನಾಟಕ ವಿಧಾನ ಪರಿಷತ್ತು ಅಧಿವೇಶನ ಇಲ್ಲದಿರುವುದರಿಂದ ಅಧ್ಯಾದೇಶ ಹೊರಡಿಸಲು ಶೀಘ್ರ ಕ್ರಮ ತೆಗೆದುಕೊಳ್ಳಲು ಅವಶ್ಯಗೊಳಿಸುವಂಥ ವಿದ್ಯಮಾನಗಳು ಉಂಟಾಗಿವೆ. ಈ ಬಗ್ಗೆ ಕರ್ನಾಟಕದ ರಾಜ್ಯಪಾಲರಿಗೆ ಮನದಟ್ಟಾಗಿರುವುದರಿಂದ ಸಂವಿಧಾನದ 213ನೇ ಅನುಚ್ಛೇದದ (1)ನೇ ಖಂಡದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕದ ರಾಜ್ಯಪಾಲರು ಈ ಸುಗ್ರೀವಾಜ್ಞೆ ಹೊರಡಿಸಿರುತ್ತಾರೆ ಎಂದು ರಾಜ್ಯಪತ್ರದಲ್ಲಿ ಉಲ್ಲೇಖಿಸಲಾಗಿದೆ.