ಬೆಂಗಳೂರು: ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕಕ್ಕೆ (ಮತಾಂತರ ನಿಷೇಧ ಕಾಯಿದೆ) ರಾಜ್ಯಪಾಲರ ಅಂಕಿತ ಬಿದ್ದಿದೆ. ಈ ಮೂಲಕ ರಾಜ್ಯದಲ್ಲಿ ಈ ಕಾಯ್ದೆಯು ಅಧಿಕೃತವಾಗಿ ಜಾರಿಯಾದಂತಾಗಿದೆ. ರಾಜ್ಯ ಸರ್ಕಾರ ಇಂದು ಈ ಸಂಬಂಧ ರಾಜ್ಯಪತ್ರ ಹೊರಡಿಸಿದೆ.
ರಾಜ್ಯದಲ್ಲಿ ಕಾಯಿದೆ ಜಾರಿಯಿಂದಾಗಿ ಬಲವಂತದ, ವಂಚನೆ, ಒತ್ತಾಯ ಮತ್ತು ಆಮಿಷದ ಮೂಲಕ ಮತಾಂತರಕ್ಕೆ ಕಡಿವಾಣ ಹಾಕಲಾಗಿದೆ. ಮದುವೆಯಾಗುವ ಭರವಸೆಯ ನೀಡಿ ನಡೆಸುವ ಮತಾಂತರಕ್ಕೆ ನಿಷೇಧಿಸಲಾಗಿದೆ. ಮತಾಂತರಗೊಂಡ ವ್ಯಕ್ತಿಯ ಪೋಷಕರು, ಸಹೋದರ, ಸಹೋದರಿ, ಸಹವರ್ತಿ ಅಥವಾ ಸಹೋದ್ಯೋಗಿಗಳು ಮತಾಂತರದ ಬಗ್ಗೆ ದೂರು ನೀಡಬಹುದಾಗಿದೆ.
ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಗದ್ದಲ, ಗೊಂದಲದ ನಡುವೆ ಸರ್ಕಾರವು ಮತಾಂತರ ನಿಷೇಧ ಕಾಯಿದೆಗೆ ವಿಧಾನಸಭೆಯಲ್ಲಿ ಅನುಮೋದನೆಯನ್ನು ಪಡೆದುಕೊಳ್ಳಲಾಗಿತ್ತು. ಆದರೆ, ವಿಧಾನಪರಿಷತ್‌ನಲ್ಲಿ ಆಡಳಿತರೂಢ ಬಿಜೆಪಿಗೆ ಸಂಖ್ಯಾಬಲ ಕೊರತೆ ಇದ್ದ ಕಾರಣ ಅಲ್ಲಿ ಮಂಡಿಸಲಿಲ್ಲ.
ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ ನಂತರ ಸಚಿವ ಸಂಪುಟ ಸಭೆಯ ಅನುಮೋದನೆ ಪಡೆದುಕೊಂಡು ರಾಜ್ಯಪಾಲರಿಂದ ಸುಗ್ರೀವಾಜ್ಞೆ ಹೊರಡಿಲಾಗಿತ್ತು. ಇತ್ತೀಚೆಗೆ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿ ಸಂಖ್ಯಾಬಲ ಹೆಚ್ಚಿಸಿಕೊಂಡಿತ್ತು. ಪರಿಷತ್ನಲ್ಲಿ ಸಂಖ್ಯಾಬಲ ಹೆಚ್ಚಿಸಿಕೊಂಡ ಹಿನ್ನೆಲೆ ಮಳೆಗಾಲದ ಅಧಿವೇಶನದಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಂಡಿದೆ. ಇದೀಗ ರಾಜ್ಯಪಾಲರು ಕಾಯಿದೆಗೆ ಅಂಕಿತ ಹಾಕಿದ್ದು, ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ಅಧಿಕೃತವಾಗಿ ಜಾರಿಗೆಬಂದಿದೆ.
ಕಾಯ್ದೆಯಲ್ಲಿರುವ ಪ್ರಮುಖ ಅಂಶಗಳೇನು? :
- ಬಲವಂತದ ಮತಾಂತರ ಜಾಮೀನು ರಹಿತ ಅಪರಾಧ ಮತ್ತು ಅಸಿಂಧು.
- ಉಡುಗೊರೆ, ಕೆಲಸ, ಉಚಿತ ಶಿಕ್ಷಣ, ವಿವಾಹದ ಆಮಿಷ ಒಡ್ಡಿ ಮತಾಂತರ ಮಾಡುವಂತಿಲ್ಲ.
- ಆಮಿಷವೊಡ್ಡಿ ಮತಾಂತರಗೊಂಡು ವಿವಾಹವಾದರೆ ಅದು ಅಸಿಂಧು.
- ಮತಾಂತರದಲ್ಲಿ ಶಿಕ್ಷಣ ಸಂಸ್ಥೆ, ಆಶ್ರಮ, ಧಾರ್ಮಿಕ ಮಿಷನರಿ, ಎನ್‌ಜಿಓಗಳು ಭಾಗವಹಿಸುವಂತಿಲ್ಲ.
- ಮತಾಂತರದಲ್ಲಿ ಭಾಗಿಯಾದ ಸಂಸ್ಥೆಗಳಿಗೆ ಸರ್ಕಾರದ ಅನುದಾನ ಸ್ಥಗಿತ.
- ಮತಾಂತರವಾಗುವ ವ್ಯಕ್ತಿ ಕನಿಷ್ಠ 30 ದಿನದ ಮೊದಲು ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬೇಕು.
- ಮತಾಂತರ ಮಾಡುವ ವ್ಯಕ್ತಿಯೂ ಜಿಲ್ಲಾಧಿಕಾರಿಗೆ 30 ದಿನ ಮೊದಲೇ ಮಾಹಿತಿ ನೀಡಬೇಕು.
- ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ ಕಚೇರಿ ಸೂಚನಾ ಫಲಕದಲ್ಲಿ ಈ ಬಗ್ಗೆ ಮಾಹಿತಿ ಒದಗಿಸಬೇಕು.
- ಇದಕ್ಕೆ 30 ದಿನಗಳೊಳಗಾಗಿ ಆಕ್ಷೇಪಣೆ ಬಂದರೆ ಕಂದಾಯ ಅಥವಾ ಸಮಾಜ ಕಲ್ಯಾಣ ಇಲಾಖೆ ಮೂಲಕ ವಿಚಾರಣೆ.
- ವಿಚಾರಣೆಯಲ್ಲಿ ತಪ್ಪು ಕಂಡಬಂದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅವಕಾಶ.
- ಮತಾಂತರಗೊಂಡ ಎಸ್‌ಸಿ/ಎಸ್‌ಟಿ ವ್ಯಕ್ತಿಗಳಿಗೆ ಸಿಗುವ ಮೀಸಲಾತಿ, ಇತರೆ ಸೌಲಭ್ಯ ರದ್ದು.
- ಬಲವಂತದ ಮತಾಂತರಕ್ಕೆ 3 ರಿಂದ 5 ವರ್ಷದವರೆಗೆ ಶಿಕ್ಷೆ, 25 ಸಾವಿರ ರೂ. ದಂಡ.
- ಬಲವಂತವಾಗಿ ಮತಾಂತರಕ್ಕೆ 3 ರಿಂದ 10 ವರ್ಷದವರೆಗೆ ಶಿಕ್ಷೆ ಮತ್ತು 50 ಸಾವಿರ ರೂ. ದಂಡ.
ಇದನ್ನೂ ಓದಿ :ಮತಾಂತರ ನಿಷೇಧ ಕಾಯ್ದೆಯಿಂದ ಧರ್ಮ ಒಡೆಯುವುದಕ್ಕೆ ಕಡಿವಾಣ: ಸಚಿವ ಆರಗ ಜ್ಞಾನೇಂದ್ರ