ಕರ್ನಾಟಕ

karnataka

ETV Bharat / state

ಸರ್ಕಾರ‌ ಕಾರ್ಮಿಕರ ಆರೋಗ್ಯ ವಿಚಾರದಲ್ಲಿ ಚೆಲ್ಲಾಟವಾಡುತ್ತಿದೆ: ಹೆಚ್​ಡಿಕೆ ಕಿಡಿ

'ವಿದೇಶದಿಂದ ಸೋಂಕು ಹೊತ್ತು ಬರುವವರನ್ನೆಲ್ಲ ಬರಮಾಡಿಕೊಂಡ ಸರ್ಕಾರ ಕೊನೆಗೆ ಪೂರ್ವ ಸಿದ್ಧತೆಗಳಿಲ್ಲದೇ, ಜನರಿಗೆ ಮಾಹಿತಿ ನೀಡದೇ ಲಾಕ್‌ಡೌನ್‌ ಜಾರಿ ಮಾಡಿತು. ಜನರೂ ಸರ್ಕಾರದ ನಿರ್ಧಾರವನ್ನು ಪಾಲಿಸಿದ್ದಾರೆ'.

HDK
ಸರ್ಕಾರ‌ ಕಾರ್ಮಿಕರ ಆರೋಗ್ಯ ವಿಚಾರದಲ್ಲಿ ಚೆಲ್ಲಾಟವಾಡುತ್ತಿದೆ: ಹೆಚ್​ಡಿಕೆ ಕಿಡಿ

By

Published : May 3, 2020, 5:04 PM IST

ಬೆಂಗಳೂರು: ಸರ್ಕಾರ ಕಾರ್ಮಿಕರ ಆರೋಗ್ಯ ವಿಚಾರದಲ್ಲಿ ಚೆಲ್ಲಾಟವಾಡುತ್ತಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

ಟ್ವೀಟ್ ಮೂಲಕ ಆಕ್ರೋಶ ‌ವ್ಯಕ್ತಪಡಿಸಿರುವ ಅವರು, ಪೂರ್ವ ಸಿದ್ಧತೆಗಳಿಲ್ಲದೇ ಜಾರಿ ಮಾಡಲಾದ ಲಾಕ್‌ಡೌನ್‌ನನ್ನು ಈಗ ಮುನ್ನೆಚ್ಚರಿಕೆ ಇಲ್ಲದೇ ಸಡಿಲ ಮಾಡಲಾಗಿದೆ. ವಲಸೆ ಕಾರ್ಮಿಕರು ಊರಿಗೆ ಹೋಗಲು ಸರ್ಕಾರ ಅವಕಾಶ ಮಾಡಿಕೊಟ್ಟಿದ್ದರಿಂದ ಜನರು ಭಾರಿ ಪ್ರಮಾಣದಲ್ಲಿ ಗುಂಪು ಗೂಡುವಂತೆ ಮಾಡಿದೆ. ಈ ಮೂಲಕ ಕಾರ್ಮಿಕರ ಆರೋಗ್ಯದ ವಿಚಾರದಲ್ಲಿ ಚೆಲ್ಲಾಟವಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ವಿದೇಶದಿಂದ ಸೋಂಕು ಹೊತ್ತು ಬರುವವರನ್ನೆಲ್ಲ ಬರಮಾಡಿಕೊಂಡ ಸರ್ಕಾರ ಕೊನೆಗೆ ಪೂರ್ವ ಸಿದ್ಧತೆಗಳಿಲ್ಲದೇ, ಜನರಿಗೆ ಮಾಹಿತಿ ನೀಡದೇ ಲಾಕ್‌ಡೌನ್‌ ಜಾರಿ ಮಾಡಿತು. ಜನರೂ ಸರ್ಕಾರದ ನಿರ್ಧಾರವನ್ನು ಪಾಲಿಸಿದ್ದಾರೆ. ಹೀಗಾಗಿ ದೇಶ ಮತ್ತು ರಾಜ್ಯದಲ್ಲಿ ಕೋವಿಡ್‌ ಸಂಪೂರ್ಣ ನೀಗದೇ ಹೋದರೂ, ಸಂಭವಿಸಬಹುದಾಗಿದ್ದ ದೊಡ್ಡ ಪ್ರಮಾದ ತಪ್ಪಿದೆ ಎಂದು ವಿವರಿಸಿದ್ದಾರೆ.

ಇಷ್ಟು ದಿನ ಸಾವಿರಾರು ಕೋಟಿ ರೂಪಾಯಿಗಳನ್ನು ನಷ್ಟ ಮಾಡಿಕೊಂಡು ಪಾಲಿಸಲಾದ ಲಾಕ್‌ಡೌನ್‌ನಿಂದ ಗಳಿಸಿಕೊಂಡಿದ್ದನ್ನು ಸರ್ಕಾರ ಒಂದು ಅವೈಜ್ಞಾನಿಕ ನಡೆಯಿಂದ ಕಳೆದುಕೊಳ್ಳಬಾರದು. ಕಾರ್ಮಿಕರು ಮತ್ತು ಹಳ್ಳಿಗಳು ಸೌಖ್ಯವಾಗಿರಬೇಕು. ಈ ನಿಟ್ಟಿನಲ್ಲಿ ಸರ್ಕಾರ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನೂ ಕೈಗೊಳ್ಳಬೇಕು‌ ಎಂದು ಒತ್ತಾಯಿಸಿದ್ದಾರೆ.

ಕಾರ್ಮಿಕರನ್ನು ಊರುಗಳಿಗೆ ತಲುಪಿಸುವುದು ಆಗಬೇಕಾದ ಕಾರ್ಯವೇ. ಆದರೆ, ಈ ಕಾರ್ಯದಲ್ಲಿ ಅವರ ಆರೋಗ್ಯಕ್ಕೆ ಅಪಾಯ ಎದುರಾಗಬಾರದು. ಅವರ ಹಿತಕ್ಕಾಗಿ ಕೈಗೊಂಡ ಈ ನಿರ್ಧಾರವೇ ಅವರಿಗೆ ಸಂಚಕಾರವಾಗಿ ಪರಿಣಮಿಸಬಾರದು. ಬಸ್​ಗಳಲ್ಲೂ ದೈಹಿಕ ಅಂತರ ಪಾಲನೆಯಾಗಲಿ, ಸೂಕ್ತ ರೀತಿಯ ಪರೀಕ್ಷೆಗಳು ನಡೆಯಲಿ ಎಂದು ಆಗ್ರಹಿಸಿದ್ದಾರೆ.

ABOUT THE AUTHOR

...view details