ಕರ್ನಾಟಕ

karnataka

ETV Bharat / state

ಶಾಸಕ-ಸಂಸದರ ಕ್ರಿಮಿನಲ್ ಪ್ರಕರಣ ಹಿಂಪಡೆದ ಸರ್ಕಾರ: ದಾಖಲೆ ಸಲ್ಲಿಕೆಗೆ ಹೈಕೋರ್ಟ್ ಕಾಲಾವಕಾಶ - ಸರ್ಕಾರಕ್ಕೆ ಹೈಕೋರ್ಟ್​​ ಆದೇಶ

ಹೈಕೋರ್ಟ್ ಸಮ್ಮತಿ ಇಲ್ಲದೆ ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಸರ್ಕಾರ ಹಿಂಪಡೆದ ಹಿನ್ನೆಲೆಯಲ್ಲಿ ಆದೇಶಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಲ್ಲಿಸುವಂತೆ ಹೈಕೋರ್ಟ್​​ ರಾಜ್ಯ ಸರ್ಕಾರಕ್ಕೆ ಒಂದು ವಾರ ಕಾಲಾವಕಾಶ ನೀಡಿದೆ. ಈ ಹಿಂದೆ ಆ.31ರೊಳಗೆ ಸಲ್ಲಿಸಲು ಹೈಕೋಟ್​​ ಗಡುವು ನೀಡಿತ್ತು.

government-withdraws-criminal-cases-against-mla-and-mp
ಹೈಕೋರ್ಟ್

By

Published : Sep 2, 2021, 8:36 PM IST

ಬೆಂಗಳೂರು: ರಾಜ್ಯದ ಮಾಜಿ-ಹಾಲಿ ಸಂಸದರು ಹಾಗೂ ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದಿರುವ ಆದೇಶಕ್ಕೆ ಸಂಬಂಧಸಿದ ಎಲ್ಲ ದಾಖಲೆಗಳನ್ನು ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಇನ್ನೊಂದು ವಾರ ಕಾಲಾವಕಾಶ ನೀಡಿದೆ.

ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ಮೇಲ್ವಿಚಾರಣೆಗೆ ಸಂಬಂಧಿಸಿದಂತೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಅಮಿಕಸ್ ಕ್ಯೂರಿ ಆಗಿರುವ ಹಿರಿಯ ವಕೀಲ ಆದಿತ್ಯ ಸೋಂಧಿ ಪೀಠಕ್ಕೆ ಮಾಹಿತಿ ನೀಡಿ, ಹೈಕೋರ್ಟ್ ಸಮ್ಮತಿ ಇಲ್ಲದೆ ಜನ ಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಸರ್ಕಾರ ಹಿಂಪಡೆಯಲು ಅವಕಾಶವಿಲ್ಲ. ಈ ಸಂಬಂಧ ಹೈಕೋರ್ಟ್ ಸ್ವಯಂಪ್ರೇರಿತ ಅರ್ಜಿ ದಾಖಲಿಸಿಕೊಂಡು ಮೇಲ್ವಿಚಾರಣೆ ನಡೆಸುವುದರ ಜತೆಗೆ ಸರ್ಕಾರ ಹಿಂಪಡೆದ ಪ್ರಕರಣಗಳನ್ನು ಪರಿಶೀಲನೆಗೆ ಒಳಪಡಿಸಬಹುದು. ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಳ್ಳಬಹುದು ಎಂದು ಸುಪ್ರೀಂಕೋರ್ಟ್ 2021ರ ಆ.10ರಂದು ತೀರ್ಪು ನೀಡಿದೆ. ಅದರಂತೆ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದ ಆದೇಶಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲು ನಿರ್ದೇಶಿಸಬಹುದು ಎಂದರು.

ಸರ್ಕಾರಿ ವಕೀಲರು, ವಿವರ ಹಾಗೂ ದಾಖಲೆಗಳನ್ನು ಸಲ್ಲಿಸಲು ಒಂದು ವಾರ ಕಾಲಾವಕಾಶ ಕೋರಿದರು. ಮನವಿ ಪರಿಗಣಿಸಿದ ಪೀಠ, ರಾಜ್ಯದಲ್ಲಿ 2020ರ ಸೆ.16ರ ನಂತರ ಹಾಲಿ ಹಾಗೂ ಮಾಜಿ ಸಂಸದರು ಮತ್ತು ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಆ.31ರೊಳಗೆ ಸಲ್ಲಿಸಿ ಎಂದು ಕೋರ್ಟ್ ಹಿಂದೆಯೇ ಆದೇಶಿಸಿತ್ತು. ಆದರೆ, ಸರ್ಕಾರಿ ವಕೀಲರು ಇನ್ನೊಂದು ವಾರ ಕಾಲಾವಕಾಶ ಕೋರಿದ್ದಾರೆ. ಅದರಂತೆ ಸರ್ಕಾರಕ್ಕೆ ಒಂದು ವಾರ ಕಾಲಾವಕಾಶ ನೀಡಲಾಗುತ್ತಿದೆ ಎಂದು ತಿಳಿಸಿ ವಿಚಾರಣೆ ಮುಂದೂಡಿತು.

ABOUT THE AUTHOR

...view details