ಬೆಂಗಳೂರು: ಶಾಸಕರು ಹಾಗೂ ಸಚಿವರು ಸೇರಿದಂತೆ ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದಿರುವುದಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ಸಂಪೂರ್ಣ ವಿವರವನ್ನು ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಶಾಸಕರು, ಸಚಿವರ ವಿರುದ್ಧದ ಪ್ರಕರಣಗಳನ್ನು ಸರ್ಕಾರ ಹಿಂಪಡೆದ ವಿಚಾರ: ಸಂಪೂರ್ಣ ವಿವರ ಕೇಳಿದ ಹೈಕೋರ್ಟ್
ಶಾಸಕರು ಹಾಗೂ ಸಚಿವರು ಸೇರಿದಂತೆ ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ವಾಪಾಸ್ ಪಡೆದಿರುವ ಕುರಿತು ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಈ ಕುರಿತು ವಕೀಲೆ ಸುಧಾ ಕಾಟ್ವಾ ಹಾಗೂ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಪ್ರತ್ಯೇಕವಾಗಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಸ್.ಉಮಾಪತಿ ವಾದಿಸಿ, ಅರ್ಜಿ ಹಾಗೂ ನ್ಯಾಯಾಲಯದ ಆದೇಶಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಿಲ್ಲ ಎಂದರು.
ಪಿಯುಸಿಎಲ್ ಪರ ವಕೀಲ ಕ್ಲಿಫ್ಟನ್ ರೊಜಾರಿಯೋ ವಾದಿಸಿ, ಕಳೆದ ವರ್ಷ ಅಕ್ಟೋಬರ್ ಹಾಗೂ ಡಿಸೆಂಬರ್‌ನಲ್ಲಿ ಕೋಮು ಗಲಭೆಗೆ ಸಂಬಂಧಿಸಿದ 21 ಕ್ರಿಮಿನಲ್ ಪ್ರಕರಣಗಳನ್ನು ಸರ್ಕಾರ ವಾಪಸ್ ಪಡೆದಿದೆ ಎಂದು ತಿಳಿಸಿದರು. ಅರ್ಜಿದಾರರ ಪರ ವಕೀಲರ ವಾದ ಪರಿಗಣಿಸಿದ ಪೀಠ, 2020ರ ಡಿ. 1ರಿಂದ ಈವರೆಗೆ ರಾಜಕಾರಣಿಗಳ ವಿರುದ್ಧದ ಎಷ್ಟು ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದುಕೊಳ್ಳಲಾಗಿದೆ. ಅದರಲ್ಲಿ ಸಿಆರ್‌ಪಿಸಿ ಕಾಯ್ದೆ ಸೆಕ್ಷನ್ 321ರ ನಿಯಮಗಳನ್ನು ಪಾಲಿಸಲಾಗಿದೆಯೇ? 2020ರ ಆ. 31ರ ಆದೇಶದಂತೆ ವಾಪಸ್ ಪಡೆದುಕೊಂಡ ಕ್ರಿಮಿನಲ್ ಪ್ರಕರಣಗಳ ಪೈಕಿ ಎಷ್ಟು ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ ಎಂಬುದಕ್ಕೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಮುಂದೂಡಿದೆ.