ಬೆಂಗಳೂರು: ಗಡಿಯಾರ ಉದ್ದಿಮಗೆ ಸಂಬಂಧಿಸಿದವರು ವಾಚ್ ಪಾರ್ಕ್ ಸ್ಥಾಪಿಸಲು ಮುಂದೆ ಬಂದರೆ, ಅವರಿಗೆ ರಾಜ್ಯ ಸರ್ಕಾರ ಎಲ್ಲ ಮೂಲ ಸೌಕರ್ಯ, ಅಗತ್ಯ ಸಹಕಾರ ನೀಡಲು ಸಿದ್ಧವಿದೆ ಎಂದು ಐಟಿಬಿಟಿ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ ಸಿ ಎನ್ ಅಶ್ವತ್ಥ ನಾರಾಯಣ ಗುರುವಾರ ಹೇಳಿದರು. ಇಂಡಿಯಾ ಇಂಟರ್ ನ್ಯಾಷನಲ್ ಅಂಡ್ ಕ್ಲಾಕ್ ಫೇರ್ದಿಂದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಸಮಯ ಭಾರತಿ - 2023 ಪ್ರದರ್ಶನದ ಉದ್ಘಾಟಿಸಿ ಅವರು ಮಾತನಾಡಿದರು. ಉದ್ಯಮ ಸ್ಥಾಪಿಸಲು ಆಸಕ್ತಿ ಇರುವವರಿಗೆ ಸರ್ಕಾರ ಈಗ ತನ್ನೆಲ್ಲ ನಿಯಮಗಳನ್ನು ಸುಲಭಗೊಳಿಸಿದೆ ಎಂದರು.
ಉದ್ಯಮ ಸ್ಥಾಪನೆಗೆ ನಿಯಮ ಸರಳ: ಇಂದಿನ ದಿನಗಳಲ್ಲಿ ಉದ್ದಿಮೆದಾರರು ತಾವೇ ಉದ್ಯಮ ಪಾರ್ಕ್ ಸ್ಥಾಪಿಸಿ ನಿರ್ವಹಿಸಬಹುದು. ಇದಕ್ಕೆ ಬೇಕಾದ ಭೂಮಿ ಖರೀದಿ ಪ್ರಕ್ರಿಯೆ ಸೇರಿದಂತೆ ಮತ್ತಿತರ ಕಟ್ಟಳೆ ನಿಯಮಗಳನ್ನು ಈಗ ಸರಳಗೊಳಿಸಲಾಗಿದೆ ಎಂದು ವಿಶ್ವಾಸ ಮೂಡಿಸಿದರು. ಕೈಗಾರಿಕೆ ವಾತಾವರಣವನ್ನು ಉತ್ತೇಜಿಸುವ ಸಲುವಾಗಿ ಸರ್ಕಾರ ಬಿಗಿ ನಿಯಮಗಳಿಗೆ ಬದಲಾಗಿ ಅನುಸರಿಸಲು ಸುಲಭವಾದ ನಿಯಮಾವಳಿಯನ್ನು ಜಾರಿಗೆ ತಂದಿದೆ. ಉದ್ದಿಮೆದಾರರು ಈ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಚಿವ ಡಾ ಸಿ ಎನ್ ಅಶ್ವತ್ಥ ನಾರಾಯಣ ಅಭಿಪ್ರಾಯಪಟ್ಟರು.
ದಶಕದ ಹಿಂದೆ ಪ್ರತಿಯೊಬ್ಬರ ಕೈಯಲ್ಲಿ ಗಡಿಯಾರಗಳು ರಾರಾಜಿಸುತ್ತಿದ್ದವು. ಅವಾಗ್ಗೆ ಗಡಿಯಾರಗಳು ಧರಿಸುವುದೇ ಒಂದು ಅಂತಸ್ತು ಆಗಿತ್ತು. ಮದುವೆ ಸಮಾರಂಭದಲ್ಲೂ ವರನಿಗೆ ಪ್ರಿಯವಾದ ವಾಚುಗಳನ್ನು ಕಾಣಿಕೆಯಾಗಿ ಕೊಡುತ್ತಿದ್ದರು. ಆದರೆ, ಈಗ ಜಮಾನ ಬದಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮನಸ್ಸಿಗೆ ಒಪ್ಪುವಂಥ ಗಡಿಯಾರ ಧರಿಸುವ ಆಸೆ :ಆದರೆ ತನ್ನ ಮನಸ್ಸಿಗೆ ಒಪ್ಪುವಂತಹ,ಫ್ಯಾಶನ್ ಆಗಿರುವ ಗಡಿಯಾರವನ್ನು ಧರಿಸಬೇಕು ಎನ್ನುವುದು ಪ್ರತಿಯೊಬ್ಬರ ಆಸೆ. ಆಧುನಿಕ ತಂತ್ರ ಬೆಳದಂತೆ ಹೊಸ ಮೋಡಿಯ ವಾಚ್ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಹೊಸಮೋಡಿಯ ವಾಚ್ ಧರಿಸುವುದು ಪ್ರತಿಯೊಬ್ಬರ ಹೆಬ್ಬಯಕೆ ಆಗಿದೆ. ಹೀಗಾಗಿ ಗಡಿಯಾರ ಉದ್ಯಮ ಸದಾ ಕಾಲ ಬೇಡಿಕೆಯಲ್ಲಿರುವ ಉದ್ಯಮ ಆಗಿ ಎಂದು ಆಶಯ ವ್ಯಕ್ತಡಿಸಿದರು.