ಬೆಂಗಳೂರು: ಮಹಾರಾಷ್ಟ್ರ ರಾಜಕಾರಣದಲ್ಲಿ ಆದಂತಹ ಬೆಳವಣಿಗೆ ಕರ್ನಾಟಕದಲ್ಲಿಯೂ ಆಗುವ ದಿನಗಳು ದೂರವಿಲ್ಲ. ಇಲ್ಲಿಯೂ ಕರ್ನಾಟಕದ ಅಜಿತ್ ಪವಾರ್ ಕಾಯುತ್ತಿದ್ದು, ಮೂರು ತಿಂಗಳಿನಲ್ಲೇ ಸಿದ್ದರಾಮಯ್ಯ ಸರ್ಕಾರ ಪತನವಾಗಲಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಭವಿಷ್ಯ ನುಡಿದರು.
ಫ್ರೀಡಂ ಪಾರ್ಕ್‌ನಲ್ಲಿಂದು ನಡೆಯುತ್ತಿರುವ ಬಿಜೆಪಿ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಸದ್ಯದಲ್ಲೇ ಮಹಾರಾಷ್ಟ್ರದಂತೆ ಕರ್ನಾಟಕದಲ್ಲಿಯೂ ರಾಜಕೀಯ ಬೆಳವಣಿಗೆ ಆಗಲಿದೆ. ಕರ್ನಾಟಕ ರಾಜ್ಯದ ಅಜಿತ್ ಪವಾರ್ ಕಾಯಿತ್ತಿದ್ದಾನೆ, ಮೂರು ತಿಂಗಳಿನಲ್ಲೇ ಸರ್ಕಾರ ಪತನವಾಗಲಿದೆ ಎಂದು ಯಾವುದೇ ಹೆಸರೇಳದೆ ಪರೋಕ್ಷವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಅರ್ಥ ಬರುವಂತೆ ಪ್ರಸ್ತಾಪ ಮಾಡಿದರು.
ನಿರುದ್ಯೋಗಿ ಯುವಕರಿಗೆ ಮೂರು ಸಾವಿರ ರೂ ಕೊಡುವುದಾಗಿ ಹೇಳಿದ್ದ ಸಿದ್ದರಾಮಯ್ಯ, ಡಿಕೆಶಿ ಈಗ ಷರತ್ತು ಹಾಕಿದ್ದಾರೆ ಇದು ಸರಿಯಲ್ಲ, ಕೊಟ್ಟ ಮಾತಿನಂತೆ ಹಣ ಕೊಡದೇ ಇದ್ದರೆ ರಾಜ್ಯದ ಯುವಕರನ್ನು ಕಟ್ಟಿಕೊಂಡು ಬಿಜೆಪಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲಿದೆ. ವಿದ್ಯುತ್ ದರ ಹೆಚ್ಚಳದಿಂದ ಜನ ರೊಚ್ಚಿಗೆದ್ದಿದ್ದಾರೆ. ವಿದ್ಯುತ್ ದರ ಹೆಚ್ಚಳ ಬಿಜೆಪಿ ಸರ್ಕಾರ ಎಂದು ಆರೋಪಿಸಿದಿರಿ, ಬಿಜೆಪಿ ಮೇಲೆ ಆಪಾದನೆ ಮಾಡಿದ್ದೀರಲ್ಲ ಇದು ಯಾವ ನ್ಯಾಯ?. ಭಾಗ್ಯಜ್ಯೋತಿ ನೋಂದಣಿಗೆ ಸರ್ವರ್ ಡೌನ್ ಆಗಿದ್ದಕ್ಕೆ ಸರ್ವರ್ ಹ್ಯಾಕ್ ಆಯಿತು ಎಂದು ಸಚಿವ ಸತೀಶ್ ಜಾರಕಿಹೊಳಿ ಆರೋಪಿಸಿದ್ದಾರೆ. ಕೇಂದ್ರ ಹ್ಯಾಕ್ ಮಾಡಿದೆ ಎಂದರೂ ನಂತರ ರಾಜಕೀಯ ಹೇಳಿಕೆ ಎಂದು ಜಾರಕಿಹೊಳಿ ಒಪ್ಪಿಕೊಂಡರು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.