ಬೆಂಗಳೂರು: ಮನಃಶಾಸ್ತ್ರ ವಿಭಾಗದ 19 ಪ್ರಾಧ್ಯಾಪಕ ಹುದ್ದೆಗಳನ್ನು ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಷಯಗಳಿಗೆ ಪರಿವರ್ತಿಸಿ ಶಿಕ್ಷಣ ಇಲಾಖೆ ಹೊರಡಿಸಿದ್ದ ಆದೇಶಕ್ಕೆ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ತಡೆಯಾಜ್ಞೆ ನೀಡಿದೆ.
ಶಿಕ್ಷಣ ಇಲಾಖೆ ಆದೇಶ ಪ್ರಶ್ನಿಸಿ ಡಾ.ಎನ್.ಮೀನಾಕ್ಷಿ ಹಾಗು ಇತರೆ ಮನಃಶಾಸ್ತ್ರ ಪ್ರಾಧ್ಯಾಪಕರು ಸಲ್ಲಿಸಿರುವ ತಕರಾರು ಅರ್ಜಿ ವಿಚಾರಣೆ ನಡೆಸಿದ ಕೆಎಟಿ, ಶಿಕ್ಷಣ ಇಲಾಖೆ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಜತೆಗೆ, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು, ನಿರ್ದೇಶಕರು ಮತ್ತು ಮುಖ್ಯ ಆಡಳಿತಾಧಿಕಾರಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಅಕ್ಟೋಬರ್ 5ಕ್ಕೆ ಮುಂದೂಡಿತು.
ರಾಜ್ಯದ 16 ಪದವಿ ಕಾಲೇಜುಗಳಲ್ಲಿ ಒಟ್ಟು 19 ಮನಃಶಾಸ್ತ್ರ ಪ್ರಾಧ್ಯಾಪಕರ ಹುದ್ದೆಗಳಿದ್ದು, ವಿದ್ಯಾರ್ಥಿಗಳ ಕೊರತೆಯಿಂದ ಹುದ್ದೆಗಳೂ ಖಾಲಿ ಉಳಿದಿವೆ. ಈ ಹಿನ್ನೆಲೆಯಲ್ಲಿ 10 ಹುದ್ದೆಗಳನ್ನು ಪ್ರಾಣಿಶಾಸ್ತ್ರಕ್ಕೆ ಮತ್ತು 9 ಹುದ್ದೆಗಳನ್ನು ಸಸ್ಯಶಾಸ್ತ್ರ ವಿಭಾಗಕ್ಕೆ ಪರಿವರ್ತಿಸಿ ಕಾಲೇಜು ಶಿಕ್ಷಣ ಇಲಾಖೆ ಕಳೆದ ಜೂ.29ರಂದು ಆದೇಶ ಹೊರಡಿಸಿತ್ತು.
ಇದನ್ನು ಪ್ರಶ್ನಿಸಿ ತಕರಾರು ಅರ್ಜಿ ಸಲ್ಲಿಸಿದ್ದು, ನಾಗರಿಕ ಕಲ್ಯಾಣ ಮತ್ತು ಮಾನಸಿಕ ಆರೋಗ್ಯ ಖಾತರಿಪಡಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಆದರೆ, ಮನಃಶಾಸ್ತ್ರ ವಿಷಯವನ್ನು ಬದಿಗೊತ್ತುವ ಮೂಲಕ ಶಿಕ್ಷಣ ಇಲಾಖೆ ಮಾನಸಿಕ ಆರೋಗ್ಯ ಆರೈಕೆ ಕಾಯ್ದೆಯ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡಿದೆ. ಕಾನೂನು ಬಾಹಿರ ಮತ್ತು ಅವೈಜ್ಞಾನಿಕವಾಗಿರುವ ನಿರ್ಧಾರದಿಂದ ಮನಃಶಾಸ್ತ್ರ ಪ್ರಾಧ್ಯಾಪಕರಿಗೆ ತೊಂದರೆ ಉಂಟುಮಾಡಿದೆ. ಆದ್ದರಿಂದ ಜೂ.29ರ ಆದೇಶ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.