ಬೆಂಗಳೂರು: ರಾಜ್ಯ ಸರ್ಕಾರ ಆಡಳಿತ ಯಂತ್ರಕ್ಕೆ ಭರ್ಜರಿ ಸರ್ಜರಿ ಮಾಡಿದೆ. 17 ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ರಮಣ ರೆಡ್ಡಿ ಅವರನ್ನು ಅಭಿವೃದ್ಧಿ ಆಯುಕ್ತ ಹಾಗೂ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ. ಕಪಿಲ್ ಮೋಹನ್ ಅವರನ್ನು ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ. ಕುಮಾರ್ ನಾಯ್ಕ್ ಅವರನ್ನು ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹುದ್ದೆಯಿಂದ ವರ್ಗಾವಣೆ ಮಾಡಲಾಗಿದೆ. ಕಪಿಲ್ ಮೋಹನ್ ಅವರಿಗೆ ಪ್ರವಾಸೋದ್ಯಮ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯ ಪ್ರಭಾರಿ ಹೊಣೆಗಾರಿಕೆ ನೀಡಲಾಗಿದೆ.
ಕುಮಾರ್ ನಾಯ್ಕ್ರನ್ನು ಬಿಡಿಎ ಆಯಕ್ತರಾಗಿ ವರ್ಗಾಯಿಸಲಾಗಿದೆ. ಉಮಾಶಂಕರ್ ಅವರನ್ನು ಉನ್ನತ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾಗಿ ಹಾಗೂ ರಶ್ಮಿ ಮಹೇಶ್ರನ್ನು ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ, ಭೂಮಿ) ಪ್ರಧಾನ ಕಾರ್ಯದರ್ಶಿಯಾಗಿ ವರ್ಗಾವಣೆಗ ಮಾಡಿ ಆದೇಶಿಸಲಾಗಿದೆ. ಸೆಲ್ವಕುಮಾರ್ ಅವರು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ವರ್ಗಾವಣೆಗೊಂಡಿದ್ದಾರೆ. ಅವರಿಗೆ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ಪ್ರಭಾರ ಹುದ್ದೆ ನೀಡಲಾಗಿದೆ.
ಮನೋಜ್ ಜೈನ್ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಆಗಿದ್ದಾರೆ. ಶಿವಶಂಕರ್ ಎನ್. ಅವರನ್ನು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ಎಂಡಿಯಾಗಿ ವರ್ಗಾವಣೆ ಮಾಡಲಾಗಿದೆ. ನಳಿನ್ ಅತುಲ್ ಅವರು ಆರ್ ಡಿಪಿಆರ್ ಇಲಾಖೆಯ ಸಾಮಾಜಿಕ ಆಡಿಟ್ ನಿರ್ದೇಶಕ ಹುದ್ದೆಗೆ ವರ್ಗವಾಗಿದ್ದಾರೆ. ಮೊಹಮ್ಮದ್ ರೋಶನ್ ಅವರು ಹೆಸ್ಕಾಂನ ಎಂಡಿಯಾಗಿ ವರ್ಗಾಯಿಸಲ್ಪಟ್ಟಿದ್ದಾರೆ.
ಈಗ ಇದ್ದ ಭಾರತಿ. ಡಿ. ಅವರನ್ನು ಆ ಸ್ಥಾನದಿಂದ ವರ್ಗಾಯಿಸಲಾಗಿದೆ. ಭೊಯಾರ್ ಹರ್ಷಲ್ ನಾರಾಯಣ್ ರಾವ್ರನ್ನು ಬೆಳಗಾವಿ ಜಿಲ್ಲಾ ಪಂಚಾಯತ್ ಸಿಇಒ ಆಗಿ ವರ್ಗಾಯಿಸಲಾಗಿದೆ. ಭನ್ವರ್ ಸಿಂಗ್ ಮೀನಾರನ್ನು ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ, ಭೂ ಸ್ವಾಧೀನದ ಜಿಎಂ ಆಗಿ ವರ್ಗಾವಣೆ ಮಾಡಲಾಗಿದೆ. ಪ್ರಕಾಶ್ ನಿಟ್ಟಾಳಿ ಅವರು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಸಿಇಒ ಆಗಿ ವರ್ಗಾವಣೆ ಆಗಿದ್ದಾರೆ. ನಾಂಗ್ಜೈ ಮೊಹಮ್ಮದ್ ಅಲಿ ಅಕ್ರಮ್ ಶಾರನ್ನು ಸಕಾಲ ಮಿಷನ್ನ ಹೆಚ್ಚುವರಿ ಮಿಷನ್ ಡೈರೆಕ್ಟರ್ 2ರನ್ನಾಗಿ ವರ್ಗಾಯಿಸಲಾಗಿದೆ. ರವಿ ಎಂ ತಿರ್ಲಾಪುರ್ ಅವರು ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಉಪ ನಿರ್ದೇಶಕರಾಗಿ ವರ್ಗಾವಣೆಗೊಂಡಿದ್ದಾರೆ. ಅಲ್ಲದೆ ಅವರಿಗೆ ಬೆಂಗಳೂರು ನಗರ ಜಿಲ್ಲೆ ಜಿಲ್ಲಾ ಪಂಚಾಯತ್ ಪ್ರಭಾರಿ ಸಿಇಒ ಹುದ್ದೆ ನೀಡಲಾಗಿದೆ.
ಕಳೆದ ತಿಂಗಳು ನಡೆದಿತ್ತು ಪೊಲೀಸ್ ಅಧಿಕಾರಿಗಳ ವರ್ಗಾವಣೆ:ರಾಜ್ಯ ಚುನಾವಣೆ ಮಾರ್ಗಸೂಚಿಯಂತೆ ಕಳೆದ ಜನವರಿ 30ರಂದು ಪೊಲೀಸ್ ಇಲಾಖೆಯಲ್ಲಿ ಪ್ರಮುಖ ಅಧಿಕಾರಿಗಳ ವರ್ಗಾವಣೆ ಮಾಡಲಾಗಿತ್ತು. 13 ಐಪಿಎಸ್ ಅಧಿಕಾರಿಗಳು ಹಾಗೂ 74 ಡಿವೈಎಸ್ಪಿಗಳು ವರ್ಗಾವಣೆ ಆಗಿದ್ದರು. ರಾಜ್ಯ ವಿಧಾನಸಭೆ ಚುನಾವಣೆ ಸಮೀಪ ಬರುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ಆಯೋಗದ ನಿರ್ದೇಶನದಂತೆ ವರ್ಗಾವಣೆ ಪ್ರಕ್ರಿಯೆ ನಡೆದಿತ್ತು.
ಕಾರ್ತಿಕ್ ರೆಡ್ಡಿ - ರಾಮನಗರ ಎಸ್ಪಿ, ವಿನಾಯಕ್ ಪಾಟೀಲ್ - ಅಸಿಸ್ಟೆಂಟ್ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್, ಪೊಲೀಸ್ ಜನರಲ್, ಸಂತೋಷ್ ಬಾಬು - ಇಂಟೆಲಿಜೆನ್ಸ್. ದೇವರಾಜ್ - ಉತ್ತರ ವಿಭಾಗ ಬೆಂಗಳೂರು ನಗರ, ಸಿರಿಗೌರಿ - ಇಂಟರ್ನಲ್ ಸೆಕ್ಯೂರಿಟಿ ಡಿವಿಷನ್ (ಐಎಸ್ ಡಿ) ಟಿ.ಪಿ ಶಿವಕುಮಾರ್ - ಕೆಪಿಟಿಸಿಎಲ್, ಶೇಖರ್ ಎಚ್ - ಎಸ್ಪಿ, ಕಾನೂನು ಸುವ್ಯವಸ್ಥೆ ಬೆಳಗಾವಿ ಸಿಟಿ. ಪದ್ಮಿನಿ ಸಾಹೋ - ಚಾಮರಾಜನಗರ ಎಸ್ಪಿ, ಪ್ರದೀಪ್ ಗುಂಟಿ - ಕಾರಾಗೃಹ ಇಲಾಖೆ ಸೇರಿದಂತೆ ಹಲವರ ವರ್ಗಾವಣೆ ಮಾಡಲಾಗಿತ್ತು.
ಇದನ್ನೂ ಓದಿ:13 ಐಪಿಎಸ್ ಅಧಿಕಾರಿಗಳು ಹಾಗೂ 74 ಡಿವೈಎಸ್ಪಿಗಳ ವರ್ಗಾವಣೆ