ಬೆಂಗಳೂರು :ಹಲವಾರು ವರ್ಷಗಳಿಂದ ರೈತರು ಉಳುಮೆ ಮಾಡುತ್ತಿರುವ ಭೂಮಿಯನ್ನು ಅವರ ಹೆಸರಿಗೆ ನೀಡಲು ಸರ್ಕಾರ ಕ್ರಮಕೈಗೊಳ್ಳಲಿದೆ. ಬ್ರಿಟಿಷರ ಕಾಲದಿಂದಲ್ಲೂ ರೈತರು ಇಲ್ಲಿ ಉಳುಮೆ ಮಾಡುತ್ತಿದ್ದಾರೆ. ಸುಪ್ರೀಂಕೋರ್ಟ್ ರೈತರಿಗೆ ಭೂಮಿ ನೀಡುವಂತೆ ಸೂಚನೆ ನೀಡಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ವಿಧಾನ ಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯ ಕೆ. ಹರೀಶ್ ಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ದಕ್ಷಿಣ ಕನ್ನಡ ಭಾಗದಲ್ಲಿ ಕುಮ್ಕಿ ಭಾಣಿ ಭೂಮಿಗಳಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಟ್ಟ, ಹಾಡಿಗಳಿವೆ, ಮೈಸೂರು ಭಾಗದಲ್ಲಿ ಕಾನು ಮತ್ತು ಸೊಪ್ಪಿನ ಬೆಟ್ಟ ಭೂಮಿಗಳು, ಕೊಡಗಿನಲ್ಲಿ ಜಮ್ಮಾ ಮತ್ತು ಭಾಣಿ, ಹೈದರಾಬಾದ್ ಪ್ರದೇಶದಲ್ಲಿ ತರಿಗ ಭೂಮಿಗಳ ಬಗೆಗಿನ ವಿಶೇಷಾಧಿಕಾರಿಗಳನ್ನು ಮುಂದುವರೆಸಲು ನಿರ್ಧರಿಸಲಾಗಿದೆ ಎಂದರು.
ರಾಜ್ಯಾದ್ಯಂತ ಈ ರೀತಿ ಲಕ್ಷಾಂತರ ಎಕರೆ ಭೂಮಿ ಇದೆ. ಚಿಕ್ಕಮಗಳೂರಿನಲ್ಲಿ 45 ಸಾವಿರ ಎಕರೆ, ಹಾಸನದಲ್ಲಿ 35 ಎಕರೆ ಇದೆ. ಇದರಿಂದ ಸರ್ಕಾರಕ್ಕೂ ಆದಾಯ ಬರುತ್ತಿಲ್ಲ. ರೈತರಿಗೂ ಇಲ್ಲ ಎಂಬಂತಾಗಿದೆ. ಅದಕ್ಕಾಗಿ ಈ ಭೂಮಿಗಳನ್ನು ಉಳುಮೆ ಮಾಡುತ್ತಿದ್ದ ರೈತರಿಗೆ ನೀಡಬೇಕು ಎಂಬ ಮನಸ್ಥಿತಿಯಲ್ಲಿ ನಮ್ಮ ಸರ್ಕಾರ ಇದೆ ಎಂದರು.