ಬೆಂಗಳೂರು: ರಾಜ್ಯದ ನಗರ ಪ್ರದೇಶಗಳ ನಂತರ ಹಳ್ಳಿಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಹಳ್ಳಿಗಳಲ್ಲಿ ಸೋಂಕು ನಿಯಂತ್ರಣಕ್ಕೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಈಗಾಗಲೇ ಹೋಂ ಐಸೊಲೇಷನ್ ನಿರಾಕರಿಸಲು ನಿರ್ಧರಿಸಿದ್ದು, ಗ್ರಾಮೀಣಾಭಿವೃದ್ಧಿ ಇಲಾಖೆಯೂ ಸೋಂಕು ನಿಯಂತ್ರಣ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ನಿರ್ಧರಿಸಿದೆ.
ಹೌದು, ರಾಜ್ಯದಲ್ಲಿ ಲಾಕ್ಡೌನ್ ನಡುವೆಯೂ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ನಗರ, ಪಟ್ಟಣ ಪ್ರದೇಶಗಳಲ್ಲಿ ಸೋಂಕಿನ ಸಂಖ್ಯೆ ಅಲ್ಪ ಇಳಿಕೆ ಕಂಡಿದ್ದರೂ ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚಾಗುತ್ತಿದೆ. ಹಳ್ಳಿಗಳಲ್ಲಿ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ನಿಧಾನಕ್ಕೆ ಹೆಚ್ಚಾಗುತ್ತಿದೆ ಎನ್ನುವ ಆತಂಕಕಾರಿ ವಿಷಯ ಬಹಿರಂಗವಾಗಿದೆ.
ಹಳ್ಳಿಗಳಲ್ಲಿ ಹೋಂ ಸೋಂಕಿತರಿಗೆ ಐಸೊಲೇಷನ್ ಇಲ್ಲ!
ಹಳ್ಳಿಗಳಲ್ಲಿನ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಇದೀಗ ಹಳ್ಳಿಗಳಲ್ಲಿ ಬಿಗಿ ಕ್ರಮಕ್ಕೆ ಮುಂದಾಗಿದೆ. ಇಷ್ಟು ದಿನ ರೋಗ ಲಕ್ಷಣವಿಲ್ಲದ ಸೋಂಕಿತರನ್ನು ಹೋಂ ಐಸೊಲೇಷನ್ನಲ್ಲಿ ಇರಲು ಅನುಮತಿ ನೀಡಲಾಗುತ್ತಿತ್ತು. ಆದರೆ ಹೋಂ ಐಸೊಲೇಷನ್ ನಿಯಮ ಸರಿಯಾಗಿ ಪಾಲನೆ ಮಾಡದ ಕಾರಣದಿಂದಾಗಿಯೇ ಹಳ್ಳಿಗಳಲ್ಲಿ ಸೋಂಕು ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ಹಳ್ಳಿಗಳ ಮನೆಗಳಲ್ಲಿ ಪ್ರತ್ಯೇಕವಾಗಿರುವ ವ್ಯವಸ್ಥೆ ಇರುವುದು ವಿರಳ. ಹಾಗಾಗಿ ಸೋಂಕಿತರು ಹೋಂ ಐಸೋಲೇಷನ್ ಇದ್ದರೂ ಸೋಂಕು ಮನೆಯವರ ಮೂಲಕ ಇತರರಿಗೆ ಹರಡುತ್ತಿದೆ. ಇದನ್ನು ತಡೆಯಲು ಸರ್ಕಾರ ಇದೀಗ ಹಳ್ಳಿಗಳಲ್ಲಿ ಹೋಂ ಐಸೊಲೇಷನ್ ಪದ್ಧತಿ ಕೈಬಿಟ್ಟು ಕೋವಿಡ್ ಕೇರ್ ಸೆಂಟರ್ಗಳಿಗೆ ಸೋಂಕಿತರನ್ನು ದಾಖಲಿಸಬೇಕು ಎನ್ನುವ ನಿರ್ಧಾರ ಕೈಗೊಂಡಿದೆ.
ಪಿಡಿಒಗಳಿಗೆ ಹೆಚ್ಚಿನ ಜವಾಬ್ದಾರಿ:
ಹಳ್ಳಿಗಳಲ್ಲಿ ಮದುವೆ ಸಮಾರಂಭಗಳನ್ನು ಕೋವಿಡ್ ನಿಯಮ ಉಲ್ಲಂಘಿಸಿ ಮಾಡಲಾಗುತ್ತಿದೆ. 400-500ಕ್ಕೂ ಹೆಚ್ಚಿನ ಜನ ಸೇರುತ್ತಿದ್ದಾರೆ. ಇದು ಕೂಡ ಕೋವಿಡ್ ಸೋಂಕು ಹೆಚ್ಚಲು ಕಾರಣವಾಗುತ್ತಿದೆ. ಮದುವೆಗೆ 40 ಜನರ ಮಿತಿ ನಿಗದಿಪಡಿಸಿದ್ದರೂ ನಿಯಮ ಪಾಲನೆಯಾಗುತ್ತಿಲ್ಲ. ಹೀಗಾಗಿ ಇನ್ಮುಂದೆ ಈ ರೀತಿ ಆಗದಂತೆ ಮುನ್ನೆಚ್ಚರಿಕೆ ವಹಿಸಲು ಗ್ರಾಮಮಟ್ಟದ ಆಡಳಿತಕ್ಕೆ ಸೂಚನೆ ನೀಡಿ, ಪಿಡಿಒಗಳನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಹಳ್ಳಿಗಳಲ್ಲಿ ಮದುವೆ ಇತ್ಯಾದಿ ಶುಭ ಕಾರ್ಯಗಳ ಹೆಸರಿನಲ್ಲಿ ಜನ ಸೇರದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಪಿಡಿಒಗಳಿಗೆ ನೀಡಲಾಗುತ್ತಿದೆ. ಈ ಮೂಲಕ ಸೋಂಕು ನಿಯಂತ್ರಣಕ್ಕೆ ಸರ್ಕಾರ ವಿಶೇಷ ಗಮನ ಹರಿಸಿದೆ.