ಕರ್ನಾಟಕ

karnataka

ETV Bharat / state

ಕೋವಿಡ್​​​ ಹೆಸರಲ್ಲಿ 267 ಕೋಟಿ ರೂ. ಸಂಗ್ರಹ: ಈ ನಿಧಿಯಿಂದ ಬಿಡಿಗಾಸೂ ಖರ್ಚು ಮಾಡದ ಸರ್ಕಾರ! - Bangalore news

ಮಾರ್ಚ್ 25 ರಿಂದ ಮೇ 19ರವರೆಗೆ ಬರೋಬ್ಬರಿ 267 ಕೋ.ರೂ ಸಂಗ್ರಹವಾಗಿದೆ. ಆದರೆ, ಸರ್ಕಾರ ಈ ಹಣದಲ್ಲಿ ಒಂದೇ ಒಂದು ರೂಪಾಯಿಯನ್ನೂ ಈವರೆಗೂ ಖರ್ಚು ಮಾಡಿಲ್ಲ. ಬದಲಾಗಿ ಕೊರೊನಾ ರೋಗ ನಿಯಂತ್ರಣ ಮಾಡಲು ಆಪತ್ ನಿಧಿಯಾಗಿ ಈ ಮೊತ್ತವನ್ನು ಸರ್ಕಾರ ಕಾಯ್ದಿರಿಸಿದೆಯಂತೆ.

Vidhana Soudha
ವಿಧಾನ ಸೌಧ

By

Published : Jun 8, 2020, 8:18 AM IST

ಬೆಂಗಳೂರು:ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹರಡುವುದನ್ನು ನಿಯಂತ್ರಿಸಲು ಮತ್ತು ರೋಗಿಗಳ ಚಿಕಿತ್ಸೆಯ ವೆಚ್ಚ ಭರಿಸಲು ನೆರವು ನೀಡುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮನವಿ ಮಾಡಿದ್ದರು. ಅದರಂತೆ ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿ ಖಾತೆಗೆ ಬರೋಬ್ಬರಿ 267 ಕೋಟಿ ರೂಪಾಯಿ ಹಣ ಹರಿದು ಬಂದಿದೆ.

ಆದರೆ, ಈ ಹಣದಲ್ಲಿ ನಯಾ ಪೈಸೆ ಕೂಡ ಖರ್ಚು ಮಾಡಿಲ್ಲ ಎಂಬ ಅಚ್ಚರಿ ಅಂಶ ಇದೀಗ ಬಹಿರಂಗವಾಗಿದೆ. ನಿಜ, ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ಜನ ಉದಾರವಾಗಿ ಹಣ ನೀಡಿದ್ದು, ಮಾರ್ಚ್ 25 ರಿಂದ ಮೇ 19ರವರೆಗೆ ಬರೋಬ್ಬರಿ 267 ಕೋ.ರೂ ಸಂಗ್ರಹವಾಗಿದೆ. ಆದರೆ, ಸರ್ಕಾರ ಈ ಹಣದಲ್ಲಿ ಒಂದೇ ಒಂದು ರೂಪಾಯಿಯನ್ನೂ ಈವರೆಗೂ ಖರ್ಚು ಮಾಡಿಲ್ಲ. ಬದಲಾಗಿ ಕೊರೋನಾ ರೋಗ ನಿಯಂತ್ರಣ ಮಾಡಲು ಆಪತ್ ನಿಧಿಯಾಗಿ ಈ ಮೊತ್ತವನ್ನು ಸರ್ಕಾರ ಕಾಯ್ದಿರಿಸಿದೆಯಂತೆ. ಮಾಹಿತಿ ಹಕ್ಕು ಕಾರ್ಯಕರ್ತ ಟಿ. ನರಸಿಂಹಮೂರ್ತಿ ಅವರು ಸರ್ಕಾರದಿಂದ ಆರ್​ಟಿಐ ಅಡಿ ಪಡೆದುಕೊಂಡ ಮಾಹಿತಿಯಿಂದ ಈ ವಿಷಯ ಹೊರ ಬಿದ್ದಿದೆ.

ಸರ್ಕಾರ ನೀಡಿರುವ ಮಾಹಿತಿ:

ಕೊರೊನಾ ನಿಯಂತ್ರಣ ಮತ್ತು ಚಿಕಿತ್ಸೆಗೆ ಸಿಎಂ ಕೋರಿಕೆ ಮೇರೆಗೆ ಸಾರ್ವಜನಿಕರು ಸರ್ಕಾರಕ್ಕೆ ಎಷ್ಟು ಹಣ ನೀಡಿದ್ದಾರೆ ಮತ್ತು ಜನ ನೀಡಿದ ಹಣದಲ್ಲಿ ಎಷ್ಟು ಹಣವನ್ನು ಸೋಂಕು ತಡೆಗೆ ಬಳಸಿಕೊಳ್ಳಲಾಗಿದೆ ಎಂಬ ವಿವರಗಳನ್ನು ನೀಡುವಂತೆ ಕೋರಿ ನರಸಿಂಹಮೂರ್ತಿ ಆರ್​ಟಿಐ ಅಡಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು.

ಇದಕ್ಕೆ ಆಡಳಿತ ಹಾಗೂ ಸಾರ್ವಜನಿಕ ಮಾಹಿತಿ ಇಲಾಖೆ ಅಧೀನ ಕಾರ್ಯದರ್ಶಿ ಜಿ.ಎಲ್. ಗಣೇಶ ಕುಮಾರ್ ಮಾಹಿತಿ ನೀಡಿದ್ದು, ಮುಖ್ಯಮಂತ್ರಿ ಕೋವಿಡ್-19 ಪರಿಹಾರ ನಿಧಿ ಖಾತೆಗೆ ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳು ಮತ್ತು ನಿಗಮ ಮಂಡಳಿಗಳಿಂದ ಒಟ್ಟು 267,72,37,574( 267ಕೋಟಿ) ರೂಪಾಯಿ ಸಂಗ್ರಹವಾಗಿದೆ. ಹೀಗೆ ಸಂಗ್ರಹವಾಗಿರುವ ಹಣವನ್ನು ಕೊರೊನಾ ರೋಗ ನಿಯಂತ್ರಿಸಲು ಅವಶ್ಯ ತುರ್ತು ಸೇವೆಗಳಿಗೆ ಉಪಯೋಗಿಸುವ ಸಲುವಾಗಿ ‘ಆಪತ್ ನಿಧಿ’ಯಾಗಿ ಕಾಯ್ದಿರಿಸಲಾಗಿದೆ.

ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕ ರೋಗದ ಚಿಕಿತ್ಸೆಗೆ ಮತ್ತು ರೋಗ ಹರಡುವುದನ್ನು ತಪ್ಪಿಸುವುದಕ್ಕೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ ಅನುದಾನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ಮೇ 19 ರವರೆಗೆ ಮುಖ್ಯಮಂತ್ರಿ ಪರಿಹಾರ ನಿಧಿ ಕೋವಿಡ್-19 ನಿಧಿ ಖಾತೆಗೆ ಜಮೆಯಾಗಿರುವ ಒಟ್ಟು 267 ರೂಪಾಯಿ ಹಣ ಹಾಗೇ ಉಳಿದಿದ್ದು, ಅದನ್ನು ಆಪತ್ ನಿಧಿಯಾಗಿ ಕಾಯ್ದಿರಿಸಲಾಗಿದೆ ಎಂದು ಗಣೇಶ್ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಆರ್​ಟಿಐ ಕಾರ್ಯಕರ್ತ ನರಸಿಂಹಮೂರ್ತಿ, ಕೊರೊನಾ ರೋಗ ನಿಯಂತ್ರಣ ಹಾಗೂ ರೋಗಿಗಳ ಚಿಕಿತ್ಸೆಗಾಗಿ ಸಿಎಂ ನೆರವು ಕೋರಿದ್ದರಿಂದಲೇ ಜನ 267 ಕೋಟಿ ಹಣ ನೀಡಿದ್ದಾರೆ. ಆದರೆ, ಸರ್ಕಾರ ಈ ಹಣದಿಂದ ನಯಾ ಪೈಸೆಯನ್ನೂ ವ್ಯಯಿಸಿಲ್ಲ. ಬದಲಿಗೆ ವಿವಿಧ ಇಲಾಖೆಗಳ ಅನುದಾನ ಬಳಸಿಕೊಳ್ಳಲಾಗಿದೆ ಎನ್ನುತ್ತಿದೆ. ಹಾಗಾದರೆ ಸರ್ಕಾರಕ್ಕೆ ನಿಜಕ್ಕೂ ಆರ್ಥಿಕ ಸಂಕಷ್ಟ ಇರಲಿಲ್ಲವೇ? ಜನರಿಂದ ಸಂಗ್ರಹಿಸಿರುವ ಹಣವನ್ನು ಅವಶ್ಯಕ ತುರ್ತು ಸೇವೆಗೆ ಉಪಯೋಗಿಸಲು ಆಪತ್ ನಿಧಿಯಾಗಿ ಕಾಯ್ದಿರಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಹಾಗಾದರೆ, ವ್ಯಾಪಕವಾಗಿ ಕೊರೊನಾ ರೋಗ ಹರಡುತ್ತಿರುವ ಈ ಸಮಯ ತುರ್ತು ಪರಿಸ್ಥಿತಿಯಲ್ಲವೇ? ಎಂದಿದ್ದಾರೆ. ಜತೆಗೆ ಸರ್ಕಾರದ ನಡೆ ಅನುಮಾನಾಸ್ಪದವಾಗಿದೆ ಎಂದಿದ್ದಾರೆ.

ABOUT THE AUTHOR

...view details