ಬೆಂಗಳೂರು: ಅನಧಿಕೃತವಾಗಿ ಪ್ಲಾಂಟೇಷನ್ ಬೆಳೆಗಳನ್ನು ಬೆಳೆಯುತ್ತಿದ್ದ ಜಮೀನನ್ನು ಗುತ್ತಿಗೆ ನೀಡಿ ಸಕ್ರಮ ಮಾಡಲು ಸರ್ಕಾರ ಕ್ರಮ ಕೈಗೊಂಡಿದ್ದು, ಮುಖ್ಯಮಂತ್ರಿಗಳಿಗೆ ಕಡತ ಸಲ್ಲಿಕೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು, ಚಿಕ್ಕಮಗಳೂರು, ಹಾಸನ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸುಮಾರು 31,373 ರೈತರು 73,408 ಎಕರೆ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಪ್ಲಾಂಟೇಷನ್ ಬೆಳಗಳನ್ನು (ಕಾಫಿ, ಟೀ, ಏಲಕ್ಕಿ, ಮೆಣಸು, ರಬ್ಬರ್) ಬೆಳೆಯುತ್ತಿದ್ದಾರೆ. ಅನಧಿಕೃತವಾಗಿ ಪ್ಲಾಂಟೇಷನ್ ಬೆಳೆಗಳನ್ನು ಬೆಳೆಯುತ್ತಿರುವ ಸರ್ಕಾರಿ ಜಮೀನುಗಳನ್ನು ಕನಿಷ್ಠ ಬೆಲೆ ನಿಗದಿಪಡಿಸಿ ಗುತ್ತಿಗೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.
ಈ ಹಿಂದಿನ ಸರ್ಕಾರಗಳು ರೈತರ ಪರವಾಗಿ ಯಾವುದೇ ತೀರ್ಮಾನ ಕೈಗೊಂಡಿಲ್ಲ. ರೈತರ ಬೇಡಿಕೆಯನ್ನು ಈಡೇರಿಸಲು 30 ವರ್ಷಗಳ ಅವಧಿಗೆ ಒಂದು ಕುಟುಂಬಕ್ಕೆ ಗರಿಷ್ಠ 25 ಎಕರೆವರೆಗೆ ಗುತ್ತಿಗೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಅನಧಿಕೃತ ಪ್ಲಾಂಟೇಷನ್ ಬೆಳೆಗಳನ್ನು ಬೆಳೆಯುತ್ತಿರುವ ಜಮೀನುಗಳಿಗೆ ಗುತ್ತಿಗೆ ದರ ನಿಗದಿಪಡಿಸಲು ಮುಖ್ಯಮಂತ್ರಿಗಳಿಗೆ ಕಡತ ಸಲ್ಲಿಕೆ ಮಾಡಲಾಗಿದೆ. ಐದು ಎಕರೆವರೆಗೆ ಪ್ರತಿ ಎಕರೆಗೆ ಗುತ್ತಿಗೆ ಮೊತ್ತ ಒಂದು ಸಾವಿರ ರೂ., ಆರು ಎಕರೆಯಿಂದ 10 ಎಕರೆಯವರೆಗೆ ಪ್ರತಿ ಎಕರೆಗೆ 1,500 ರೂ., 11 ಎಕರೆಯಿಂದ 15 ಎಕರೆವರೆಗೆ ಪ್ರತಿ ಎಕರೆಗೆ ಎರಡು ಸಾವಿರ ರೂ., 16 ಎಕರೆಯಿಂದ 20 ಎಕರೆವರೆಗೆ ಪ್ರತಿ ಎಕರೆಗೆ 2,500 ರೂ., 21 ಎಕರೆಯಿಂದ 25 ಎಕರೆವರೆಗೆ ಮೂರು ಸಾವಿರ ರೂ. ಗುತ್ತಿಗೆ ಮೊತ್ತ ನಿಗದಿ ಮಾಡಲಾಗಿದೆ. 25 ಎಕರೆಗೂ ಹೆಚ್ಚು ವಿಸ್ತೀರ್ಣದಲ್ಲಿ ಅನಧಿಕೃತವಾಗಿ ಪ್ಲಾಂಟೇಷನ್ ಬೆಳೆಗಳನ್ನು ಬೆಳೆಯುತ್ತಿದ್ದರೆ 25 ಎಕರೆಗೆ ಗುತ್ತಿಗೆಯನ್ನು ಮಿತಿಗೊಳಿಸಲಾಗುವುದು ಎಂದು ತಿಳಿಸಿದರು.