ಬೆಳಗಾವಿ: ಮತಾಂತರ ನಿಷೇಧ ಕಾಯ್ದೆ ಜಾರಿ ವಿಚಾರದಲ್ಲಿ ಸರ್ಕಾರ ಹಠ ಹಿಡಿದದ್ದು ಸರಿಯಲ್ಲ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ವಿಧಾನ ಪರಿಷತ್ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರತಿಪಕ್ಷ ಸದಸ್ಯರನ್ನು ಅಷ್ಟೊತ್ತು ಕಾಯಿಸಿರೋದು ಸರಿಯಲ್ಲ. ಜಿದ್ದಿಗೆ ಬಿದ್ದು ಬಿಲ್ ಪಾಸ್ ಆಗಲೇ ಬೇಕು ಎಂದು ಹೀಗೆ ಮಾಡಿದ್ದಾರೆ. ಅದಕ್ಕೆ ಒಂದಿಷ್ಟು ಗೊಂದಲ ಆಯ್ತು. ಬಿಲ್ ಬಗ್ಗೆ ಅಷ್ಟು ಆಸಕ್ತಿ ವಹಿಸುವ ಬದಲೂ ಜನ ಪರ ಕೆಲಸಗಳ ಬಗ್ಗೆ ಆಸಕ್ತಿ ವಹಿಸಬೇಕಿತ್ತು. ಕೊನೆಯ ಗಳಿಗೆಯಲ್ಲಿ ಈ ರೀತಿಯಾದ ಘಟನೆ ನಡೆಯಬಾರದಿತ್ತು. ಇದಕ್ಕೆ ವಿಷಾದ ವ್ಯಕ್ತಪಡಿಸಿದ್ದೇನೆ. ನಾನು ಸುದೀರ್ಘವಾಗಿ ಬದ್ಧತೆ, ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ನೂರಕ್ಕೆ ನೂರರಷ್ಟು ನನಗೆ ತೃಪ್ತಿ ಇದೆ ಎಂದು ವಿವರಿಸಿದರು.