ಬೆಂಗಳೂರು: ನೂತನವಾಗಿ ಸರ್ಕಾರಿ ಪ್ರಾರ್ಥಮಿಕ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲು ಮೀನಮೇಷ ಎಣಿಸುತ್ತಿದ್ದ ಅಧಿಕಾರಿಗಳ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿರುವ ಹೈಕೋರ್ಟ್, ಮಕ್ಕಳ ಶಿಕ್ಷಣದ ಕುರಿತು ಜಪಾನ್ ದೇಶದಿಂದ ರಾಜ್ಯ ಸರ್ಕಾರ ಕಲಿತುಕೊಳ್ಳಬೇಕಾಗಿದೆ ಎಂದು ತಿಳಿಸಿದೆ.
ಬೆಂಗಳೂರು-ಮೈಸೂರು ರಸ್ತೆ ಅಗಲೀಕರಣಕ್ಕಾಗಿ ಶಾಲೆಯ ಕಟ್ಟಡ ಮತ್ತು ಜಮೀನನ್ನು ಬಿಟ್ಟುಕೊಟ್ಟು ಪರಿಹಾರವನ್ನು ಪಡೆದಿದ್ದರೂ, ನೂತನವಾಗಿ ಶಾಲೆ ನಿರ್ಮಿಸಲು ಸ್ಥಳಾವಕಾಶ ಒದಗಿಸದೇ ಮತ್ತು ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡದ ಅಧಿಕಾರಿಗಳ ಕ್ರಮ ಪ್ರಶ್ನಿಸಿ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಅಗರಲಿಂಗನ ದೊಡ್ಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ(ಎಸ್‌ಡಿಎಂಸಿ) ಅರ್ಜಿ ಸಲ್ಲಿಸಿತ್ತು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಜಪಾನ್ ದೇಶದ ಕ್ರಮ ಪ್ರಸ್ತಾಪಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ.
ಅಲ್ಲದೆ, ಜಪಾನ್ ದೇಶದದ ಹೊಕ್ಕೈಡೋ ಎಂಬ ದ್ವೀಪದ ಹಳ್ಳಿಯೊಂದರಲ್ಲಿ ರೈಲು ನಿಲ್ದಾಣದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ಅಲ್ಲಿನ ಸರ್ಕಾರ ಮುಂದಾಗಿತ್ತು. ಆದರೆ, ವಿದ್ಯಾರ್ಥಿನಿಯೊಬ್ಬಳು ರೈಲಿನಲ್ಲಿ ಪ್ರಯಾಣಿಸಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ ಎಂಬ ಅಂಶವನ್ನು ಅರಿತು ಆ ಒಂದೇ ವಿದ್ಯಾರ್ಥಿನಿ ಪ್ರೌಢ ಶಿಕ್ಷಣದಿಂದ ಪದವಿಯವರೆಗೂ ಶಿಕ್ಷಣ ಮುಂದುವರೆಸಲು ರೈಲ್ವೆ ನಿಲ್ದಾಣ ಮತ್ತು ರೈಲು ಸಂಚಾರ ಮುಂದುವರೆಸಿತ್ತು.
ಈ ಅಂಶ ಬಹಿರಂಗವಾಗುತ್ತಿದ್ದಂತೆ ಜಪಾನ್ ದೇಶದ ಸರ್ಕಾರಕ್ಕೆ ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ, ನಮ್ಮ ಸರ್ಕಾರಿ ಅಧಿಕಾರಿಗಳು, ಶಾಲೆ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡದೆ ಮಕ್ಕಳ ಶಿಕ್ಷಣ ಹಕ್ಕುಗಳನ್ನು ಹರಣ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದೆ.
ಮಣ್ಣಿನ ಹಗ್ಗ ಮಾಡಿ ಎಳೆಯುವುದನ್ನು ಬಿಡಲಾಗದು: ಸಂವಿಧಾನದ ಪರಿಚ್ಛೇದ 21ಎ ರ ಅಡಿ ಶಿಕ್ಷಣ ಪಡೆಯುವುದು ಮಕ್ಕಳ ಮೂಲಭೂತ ಹಕ್ಕಾಗಲಿದೆ. ಇದನ್ನು ಕೇವಲ ಮಣ್ಣಿನ ಹಗ್ಗದಂತೆ ಮಾಡಿ ಎಳೆಯುವಂತೆ ಮಾಡುವುದಕ್ಕೆ ನ್ಯಾಯಾಲಯ ಅವಕಾಶ ನೀಡುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ. ಅಷ್ಟೇ ಅಲ್ಲದೆ, ಮುಂದಿನ ಸೆಪ್ಟಂಬರ್ ಅಂತ್ಯದ ವೇಳೆ ಶಾಲೆಗೆ ಅಗತ್ಯವಿರುವ ಭೂಮಿ ಮತ್ತು ಹೊಸ ಕಟ್ಟಡ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು. ಈ ಸಂಬಂಧದ ಆದೇಶದ ಅನುಷ್ಠಾನದ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಬೇಕು ಎಂದು ನ್ಯಾಯಪೀಠ ತಿಳಿಸಿದೆ.