ಬೆಂಗಳೂರು: ಸಾಮಾಜಿಕ ನ್ಯಾಯ ಸೂತ್ರದಡಿ ಅಸಮಾತೋಲನ ಅಪಾಯವನ್ನು ತಪ್ಪಿಸುವ ದೃಷ್ಟಿಯಿಂದ ಈಗಾಗಲೇ ಸಿದ್ಧವಾಗಿರುವ ನ್ಯಾಯವಾದಿ ಕಾಂತರಾಜು ಆಯೋಗದ ಜಾತಿವಾರು ಸಮೀಕ್ಷೆಯನ್ನು ಈ ಕೂಡಲೇ ರಾಜ್ಯ ಸರ್ಕಾರ ಸ್ವೀಕರಿಸಬೇಕು ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಸಂಚಾಲಕ ಮಾವಳ್ಳಿ ಶಂಕರ್ ಒತ್ತಾಯಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಜಂಟಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ರಾಜ್ಯ ಹಿಂದುಳಿದ ವರ್ಗಗಳ ಪರಿಷ್ಕೃತ ಪಟ್ಟಿಯನ್ನು ಪರಿಷ್ಕರಣೆ ಮಾಡದೆ ಇರುವ ಕಾರಣ ಕಾಂತರಾಜು ಆಯೋಗದ ವರದಿ ಬಿಡುಗಡೆಗೊಳಿಸಿ, ಅದನ್ನು ಅಂಗೀಕರಿಸುವ ಮೂಲಕ ಶೀಘ್ರ ಜಾರಿಗೆ ತರಬೇಕು ಎಂದರು.
ವರದಿ ಸ್ವೀಕರಿಸದಿದ್ದ ಪಕ್ಷದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಹಾಗೂ ಅವಶ್ಯವಿದ್ದಲ್ಲಿ ಕಾನೂನು ಹೋರಾಟ ನಡೆಸಲಾಗುವುದು. ಈಗಿನ ಸರ್ಕಾರ ನಮ್ಮ ತಾಳ್ಮೆಯನ್ನು ಇನ್ನಷ್ಟು ಪರೀಕ್ಷಿಸಬಾರದು. ವರದಿ ಸ್ವೀಕರಿಸುವುದು ಸರ್ಕಾರದ ಆದ್ಯ ಕರ್ತವ್ಯ. ಆದರೂ ಇದನ್ನು ಲೆಕ್ಕಿಸದೇ ಕೆಲ ಪ್ರಬಲ ಜಾತಿಗಳ ಕೂಗಿಗೆ, ಆ ಜಾತಿಗಳ ಓಲೈಕೆಗೆ ವರದಿಯನ್ನು ಮೂಲೆಗುಂಪು ಮಾಡಲಾಗಿದೆ. ವಾಸ್ತವವಾಗಿ ಹಿಂದುಳಿದ ವರ್ಗಗಳ ಏಳಿಗೆಗೆ ಸರ್ಕಾರಗಳು ಕುತ್ತು ತಂದಿವೆ. ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡುತ್ತಿವೆ ಎಂದು ಆರೋಪಿಸಿದರು.
ಕರ್ನಾಟಕ ರಾಜ್ಯದಲ್ಲಿ 1975 ರ ಹಾವನೂರು ಆಯೋಗದ ವರದಿಯ ಪ್ರಕಾರ ಹಿಂದುಳಿದ ವರ್ಗಗಳಿಗೆ ಶೇ 40 ರಷ್ಟು ಮೀಸಲಾತಿಯನ್ನು ನೀಡಲಾಗಿತ್ತು. ತದನಂತರ ಸುಪ್ರೀಂ ಕೋರ್ಟ ಆದೇಶದ ಪ್ರಕಾರ ಪ್ರತ್ಯೇಕ ಆಯೋಗ ರಚನೆ ಮಾಡಿ ಹಿಂದುಳಿದ ವರ್ಗಗಳ ವರದಿ ತಯಾರು ಮಾಡಲು ಕರ್ನಾಟಕ ರಾಜ್ಯದಲ್ಲಿ 1983 ರಲ್ಲಿ ಟಿ.ವೆಂಕಟಸ್ವಾಮಿ ಆಯೋಗ ರಚನೆಯಾಯಿತು. 1986 ರಲ್ಲಿ ತನ್ನ ಸಂಪೂರ್ಣ ವರದಿಯನ್ನು ಆಯೋಗ ಸಲ್ಲಿಸಿತು. ಆದರೆ ಆದರೆ ಸರ್ಕಾರ ವರದಿಯನ್ನು ಮಾನ್ಯ ಮಾಡದೆ ಮತ್ತೆ ಹೊಸದಾಗಿ ಅದೇ ವರ್ಷದಲ್ಲಿ ಅಂದರೆ ಓ.ಚೆನ್ನಪ್ಪ ರೆಡ್ಡಿಯವರ ಮತ್ತೊಂದು ಆಯೋಗವನ್ನು ರಚನೆ ಮಾಡಿತು. ಈ ಆಯೋಗವು ವರದಿ ಸಂಪೂರ್ಣಗೊಳಿಸಿ ನೀಡುವಷ್ಟರಲ್ಲಿ ಬಹಳಷ್ಟು ಮುಂದುವರೆದ ಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲಾಯಿತು. ಹಾಗೆಯೇ 1986 ರಲ್ಲಿ ಆಯೋಗದ ವರದಿ ಹೊರ ಬಿದ್ದಿತು. ಅದನ್ನು ಆಗಿನ ಸರ್ಕಾರವಾಗಲಿ ಮುಂದೆ ಬಂದ ಸರ್ಕಾರವಾಗಲಿ ಗಣನೆಗೆ ತೆಗೆದುಕೊಳ್ಳದೆ ಅಸಡ್ಡೆ ತೋರಿಸಿದವು ಎಂದು ದೂರಿದ್ದಾರೆ.