ಕರ್ನಾಟಕ

karnataka

ETV Bharat / state

ಕೆಎಎಸ್ ನೇಮಕ ಅಕ್ರಮ: ತಪ್ಪು ಸರಿಪಡಿಸಲು ಕಾಲಾವಕಾಶ ಕೋರಿದ ಸರ್ಕಾರ - ಕರ್ನಾಟಕ ಲೋಕಸೇವಾ ಆಯೋಗ,

ನೇಮಕಾತಿ ಅಕ್ರಮ ಪ್ರಶ್ನಿಸಿ ಅಭ್ಯರ್ಥಿಗಳಾದ ಚನ್ನಪ್ಪ, ಕೆ. ರೂಪಶ್ರೀ ಮತ್ತಿತರರು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ಹಿರಿಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ನೇತೃತ್ವದ ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸಿದೆ.

Government seeking time for correcting the KAS recruitment illegal mistake
ಕೆಎಎಸ್ ನೇಮಕಾತಿ ಅಕ್ರಮ

By

Published : Dec 4, 2020, 9:51 PM IST

ಬೆಂಗಳೂರು: 1998ನೇ ಸಾಲಿನ ಗೆಜೆಡೆಟ್ ಪ್ರೊಬೇಷನರಿ ಅಧಿಕಾರಿಗಳ ನೇಮಕಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ 2016ರಲ್ಲಿ ನೀಡಿದ್ದ ಆದೇಶ ಪಾಲನೆಯಲ್ಲಿ ಆಗಿರುವ ಲೋಪ ಒಪ್ಪಿಕೊಂಡಿರುವ ಕರ್ನಾಟಕ ಲೋಕಸೇವಾ ಆಯೋಗ, ತನ್ನ ತಪ್ಪು ಸರಿಪಡಿಸಿಕೊಳ್ಳಲು 60 ದಿನಗಳ ಕಾಲಾವಕಾಶ ನೀಡಬೇಕು ಎಂದು ಹೈಕೋರ್ಟ್​​ಗೆ ಮನವಿ ಮಾಡಿದೆ.

ನೇಮಕಾತಿ ಅಕ್ರಮ ಪ್ರಶ್ನಿಸಿ ಅಭ್ಯರ್ಥಿಗಳಾದ ಚನ್ನಪ್ಪ, ಕೆ. ರೂಪಶ್ರೀ ಮತ್ತಿತರರು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ಹಿರಿಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ, ಆಯೋಗದ ಪರ ವಕೀಲರು, ಕೆಪಿಎಸ್ ಸಿ ಕಾರ್ಯದರ್ಶಿ ಜಿ. ಸತ್ಯವತಿ ಆಗಿರುವ ತಪ್ಪು ಸರಿಪಡಿಸಿಕೊಳ್ಳುವುದಾಗಿ ತಿಳಿಸಿದ್ದ ಪ್ರಮಾಣಪತ್ರವನ್ನು ಪೀಠಕ್ಕೆ ಸಲ್ಲಿಸಿದರು.

ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸುವಲ್ಲಿ ತಪ್ಪಾಗಿದೆ. ಆದರೆ, ಅದು ಉದ್ದೇಶಪೂರ್ವಕವಾಗಿ ಮಾಡಿದ ತಪ್ಪಲ್ಲ ಅದನ್ನು ಸರಿಪಡಿಸಿಕೊಳ್ಳಲು 60 ದಿನ ಸಮಯ ಬೇಕು ಎಂದು ಕೋರಿದರು.

ಪ್ರಮಾಣಪತ್ರ ದಾಖಲಿಸಿಕೊಂಡ ಪೀಠ ನ್ಯಾಯಾಂಗ ನಿಂದನೆ ಆರೋಪವನ್ನು ಕೈಬಿಟ್ಟಿತು. ಕೆ ಪಿಎಸ್ ಸಿ ಕಾರ್ಯದರ್ಶಿ ಜಿ. ಸತ್ಯವತಿ ಅವರು ಸಲ್ಲಿಸಿದ ಪ್ರಮಾಣ ಪತ್ರದಲ್ಲಿ, ಹೈಕೋರ್ಟ್‌ನ ವಿಭಾಗೀಯಪೀಠ 2016ರ ಜೂ, 21ರಂದು ನೀಡಿದ್ದ ತೀರ್ಪಿನ ಮೂರನೇ ನಿರ್ದೇಶನದಲ್ಲಿ 91 ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನ ಅಂಕ ಪರಿಗಣಿಸಿ ಪರಿಷ್ಕೃತ ಆಯ್ಕೆ ಪಟ್ಟಿ ಪ್ರಕಟಿಸಬೇಕಿತ್ತು. ಆದರೆ, 91 ಅಭ್ಯರ್ಥಿಗಳ ಉತ್ತರ ಪತ್ರಿಕೆಗಳನ್ನು ಪರಿಗಣಿಸಿ 2019ರ ಆ. 22ರಂದು ಆಯ್ಕೆ ಪಟ್ಟಿಯನ್ನು ಪ್ರಕಟಿಸಿತ್ತು. ಇದೀಗ ಆ ದೋಷವನ್ನು ಸರಿಪಡಿಸಲಾಗುವುದು. ಅದಕ್ಕೆ 60 ದಿನ ಸಮಯಬೇಕು ಎಂದು ಕೋರಲಾಗಿದೆ.

ಹಿಂದಿನ ವಿಚಾರಣೆ ವೇಳೆ ಕೆಪಿಎಸ್​ಸಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ನ್ಯಾಯಾಲಯ, ಶುಕ್ರವಾರ ಮಧ್ಯಾಹ್ನದೊಳಗೆ ಆಗಿರುವ ಲೋಪ ಸರಿಪಡಿಸದಿದ್ದರೆ, ಆಯೋಗದ ಕಾರ್ಯದರ್ಶಿ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ನಿಗದಿಪಡಿಸಲಾಗುವುದು ಎಂದು ಹೇಳಿತ್ತು.

ABOUT THE AUTHOR

...view details