ಬೆಂಗಳೂರು: ಆರನೇ ವೇತನ ಆಯೋಗ ಜಾರಿ ಸಾಧ್ಯವಿಲ್ಲ. ಸಾರಿಗೆ ನೌಕರರೊಂದಿಗೆ ಮತ್ತೆ ಮಾತುಕತೆಯ ಪ್ರಶ್ನೆಯೂ ಇಲ್ಲ, ಮುಷ್ಕರಕ್ಕೆ ಮುಂದಾದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ, ಎಸ್ಮಾ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳ ಜೊತೆ ಸಿಎಂ ಯಡಿಯೂರಪ್ಪ ಸಭೆ ನಡೆಸಿದರು. ನಾಲ್ಕು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ಅಧಿಕಾರಿಗಳ ಜೊತೆ ಸಾರಿಗೆ ನೌಕರರ ಮುಷ್ಕರದ ಕುರಿತು ಈ ವೇಳೆ ಚರ್ಚೆ ನಡೆಸಿದರು. ಪರ್ಯಾಯ ವ್ಯವಸ್ಥೆ ಕುರಿತು ಮಾತುಕತೆಯೂ ನಡೆಯಿತು.
'ಶೇ.8 ರಷ್ಟು ವೇತನ ಹೆಚ್ಚಳಕ್ಕೆ ಸರ್ಕಾರ ಸಿದ್ದವಿದೆ'
ಈ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಸಾರಿಗೆ ನೌಕರರು ಮುಷ್ಕರ ಕರೆ ಕೊಟ್ಟಿದ್ದಾರೆ. ಆ ಬಗ್ಗೆ ಸಿಎಂ ಸಭೆ ಮಾಡಿದ್ದಾರೆ. ಕೋವಿಡ್ ಪರಿಸ್ಥಿತಿಯಲ್ಲಿ ಮುಷ್ಕರಕ್ಕೆ ಹೋಗಬಾರದು ಅಂತ ಮನವಿ ಮಾಡುತ್ತಿದ್ದೇವೆ. 9 ಬೇಡಿಕೆಗಳಲ್ಲಿ ಈಗಾಗಲೇ 8 ಬೇಡಿಕೆ ಈಡೇರಿಸಿದ್ದೇವೆ. 6 ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಸಾಧ್ಯವಿಲ್ಲ. ಆದರೆ ಶೇ.8 ರಷ್ಟು ವೇತನ ಹೆಚ್ಚಳಕ್ಕೆ ಸರ್ಕಾರ ಸಿದ್ದವಿದೆ. ಚುನಾವಣೆ ನೀತಿ ಸಂಹಿತೆ ಇರುವುದರಿಂದ ಈಗ ಘೋಷಣೆ ಮಾಡಲು ಆಗಲ್ಲ. ಚುನಾವಣಾ ಆಯೋಗ ಅನುಮತಿ ಕೊಟ್ಟರೆ ಘೋಷಣೆ ಮಾಡುತ್ತೇವೆ. ಇಲ್ಲದಿದ್ದಲ್ಲಿ ಚುನಾವಣೆ ಬಳಿಕ ಘೋಷಣೆ ಮಾಡುತ್ತೇವೆ ಎಂದರು.