ಬೆಂಗಳೂರು: ಶೈಕ್ಷಣಿಕ ವರ್ಷಾರಂಭವಾದ ಮೇ 29 ರಿಂದಲೇ ರಾಜ್ಯದಲ್ಲಿ ಖಾಸಗಿ ಶಾಲೆಗಳು ಆರಂಭಗೊಂಡಿದ್ದು, ಇಂದಿನಿಂದ ಎಲ್ಲ ಸರ್ಕಾರಿ ಶಾಲೆಗಳು ಶುರುವಾಗಲಿವೆ. ಶಾಲಾರಂಭಕ್ಕೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. 1 ರಿಂದ 10ನೇ ತರಗತಿವರೆಗೂ ಮೊದಲ ದಿನದಿಂದಲೇ ಸೇತುಬಂಧ ಕಾರ್ಯಕ್ರಮ ನಡೆಸಲು ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ. ಆದರೆ ಪಠ್ಯ ಪುಸ್ತಕ ವಿತರಣೆ ವಿಳಂಬವಾಗಲಿದೆ.
ಸರ್ಕಾರಿ ಮತ್ತು ಖಾಸಗಿ ಸೇರಿದಂತೆ ಒಟ್ಟು 62,229 ಶಾಲೆಗಳು ರಾಜ್ಯದಲ್ಲಿವೆ. ಇದರಲ್ಲಿ 25,278 ಕಿರಿಯ ಪ್ರಾಥಮಿಕ ಶಾಲೆಗಳಿದ್ದು, ಹಿರಿಯ ಪ್ರಾಥಮಿಕ ಶಾಲೆಗಳು 36,951 ಹಾಗೂ 15, 867 ಮಾಧ್ಯಮಿಕ ಶಾಲೆಗಳಿವೆ. ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿ ಆಗಮಿಸಿ ಕೆಲವು ಹಿರಿಯ ತರಗತಿ ಮಕ್ಕಳು, ಪೋಷಕರ ಸಹಕಾರದೊಂದಿಗೆ ಕಳೆದ ಒಂದೆರಡು ದಿನಗಳಿಂದ ಶಾಲೆ ಸ್ವಚ್ಛಗೊಳಿಸುವ ಕಾರ್ಯ ಮಾಡಿದ್ದಾರೆ. ಆಡಳಿತ ಮಂಡಳಿ ಶಾಲೆಗಳಲ್ಲಿ ತರಗತಿ ಚಟುವಟಿಕೆಗಳ ಆರಂಭಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ಶಾಲೆಗಳು ಆರಂಭವಾಗುತ್ತಿದ್ದಂತೆ 1 ರಿಂದ 3ನೇ ತರಗತಿಗೆ ಆರಂಭದ 30 ದಿನಗಳು ಹಾಗೂ 4ರಿಂದ 10ನೇ ತರಗತಿ ಮಕ್ಕಳಿಗೆ 15 ದಿನಗಳ ಕಾಲ ಸೇತುಬಂಧ ಕಾರ್ಯಕ್ರಮ ನಡೆಸುವಂತೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಎಲ್ಲ ಶಾಲೆಗಳಿಗೆ ತಿಳಿಸಿದೆ.
ಮಕ್ಕಳ ಕಲಿಕಾ ಅಂತರ ತಗ್ಗಿಸಲು ಸೇತುಬಂಧವನ್ನು ಸರ್ಕಾರ ಹಮ್ಮಿಕೊಂಡಿದೆ. ಶಿಕ್ಷಣದ ಸಾಹಿತ್ಯ ಮತ್ತು ವಿನ್ಯಾಸ ಸಿದ್ಧಪಡಿಸಿ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಶಾಲಾ ಹಂತದಲ್ಲಿ ಸೇತುಬಂಧ ಶಿಕ್ಷಣವನ್ನು ಅನುಷ್ಠಾನಗೊಳಿಸಲು ಸಹಕಾರಿಯಾಗುವಂತೆ ಹಾಗೂ ಶಿಕ್ಷಕರ ಸಾಮರ್ಥ್ಯ ಅಭಿವೃದ್ಧಿಗಾಗಿ ಈ ಸಾಹಿತ್ಯ ಸಿದ್ಧಪಡಿಸಿದೆ. ಮಕ್ಕಳ ವಯೋಮಾನ ಮತ್ತು ತರಗತಿಗೆ ಅನುಗುಣವಾಗಿ ಕಲಿಕಾ ಮಟ್ಟ ಹಾಗೂ ಸಾಮರ್ಥ್ಯ ಗುರುತಿಸಿ ಮುಂದಿನ ಕಲಿಕೆಗೆ ಸಿದ್ಧಗೊಳಿಸಲು ಕಲಿತಿರುವ ಮತ್ತು ಕಲಿಯುತ್ತಿರುವ ಪರಿಕಲ್ಪನೆಗಳ ಅಂತರದ ನಡುವೆ ಸಂಬಂಧ ಕಲ್ಪಿಸುವುದು ಸೇತು ಬಂಧ ಶಿಕ್ಷಣದ ಉದ್ದೇಶ.