ಕರ್ನಾಟಕ

karnataka

ETV Bharat / state

ಶಾಲಾ - ಕಾಲೇಜು ಸಮಯ ಬದಲಾವಣೆ ಮಾಡಲಾಗದು: ಹೈಕೋರ್ಟ್‌ಗೆ ಸರ್ಕಾರದ ವರದಿ - ​ ETV Bharat Karnataka

ಹೈಕೋರ್ಟ್ ನೀಡಿದ್ದ ಸಲಹೆಯಂತೆ ಸಭೆ ನಡೆಸಿರುವ ರಾಜ್ಯ ಸರ್ಕಾರ ಶಾಲಾ - ಕಾಲೇಜು ಸಮಯ ಬದಲಾವಣೆ ಮಾಡಲಾಗದು ಎಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.

ಹೈಕೋರ್ಟ್‌
ಹೈಕೋರ್ಟ್‌

By ETV Bharat Karnataka Team

Published : Dec 18, 2023, 10:46 PM IST

ಬೆಂಗಳೂರು :ರಾಜಧಾನಿ ಬೆಂಗಳೂರು ನಗರದಲ್ಲಿ ವಾಹನ ದಟ್ಟಣೆ ನಿಯಂತ್ರಿಸುವ ಸಲುವಾಗಿ ಶಾಲಾ - ಕಾಲೇಜು ಮತ್ತು ಕಾರ್ಖಾನೆಗಳ ಸಮಯ ಬದಲಾವಣೆ ಕುರಿತು ಹೈಕೋರ್ಟ್ ನೀಡಿದ್ದ ಸಲಹೆಯಂತೆ ಸಂಬಂಧಪಟ್ಟ ಪಾಲುದಾರರೊಂದಿಗೆ ಸಭೆ ನಡೆಸಿರುವ ರಾಜ್ಯ ಸರ್ಕಾರ, ಸಮಯ ಬದಲಾವಣೆ ಮಾಡಲಾಗದು ಎಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.

ಬಳ್ಳಾರಿ ರಸ್ತೆ ಅಗಲೀಕರಣ ಕುರಿತು ಸಮರ್ಪಣಾ ಸಾಂಸ್ಕೃತಿಕ ಮತ್ತು ಸಮಾಜ ಸೇವಾ ಸಂಘಟನೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯಪೀಠಕ್ಕೆ ವರದಿಯನ್ನು ಸಲ್ಲಿಸಿದ್ದು, ವರದಿಯಲ್ಲಿ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಇತರ ಕ್ರಮಗಳ ಬಗ್ಗೆ ಹಲವು ಅಂಶಗಳನ್ನು ವಿವರಿಸಲಾಗಿದೆ.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ನ್ಯಾಯಾಲಯದ ನಿರ್ದೇಶನದಂತೆ ಶಿಕ್ಷಣ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಸಂಬಂಧಿಸಿದವರೊಂದಿಗೆ ನಡೆಸಿರುವ ಹಲವು ಸುತ್ತಿನ ಮಾತುಕತೆಗಳ ಫಲಿತಾಂಶ ಒಳಗೊಂಡ ವರದಿ ಸಲ್ಲಿಸಿದರು. ಈ ವರದಿಯನ್ನು ದಾಖಲಿಸಿಕೊಂಡ ನ್ಯಾಯಪೀಠ, ಜನವರಿ ತಿಂಗಳ ಮೊದಲ ವಾರಕ್ಕೆ ಮುಂದೂಡಿತು.

ಅರ್ಜಿದಾರರ ಪರ ವಕೀಲ ಜಿ.ಆರ್. ಮೋಹನ್ ಅವರು, ರೇಸ್ ಕೋರ್ಸ್ ರಸ್ತೆಯಲ್ಲಿ ಕಾಮಗಾರಿಗಳನ್ನು ನಡೆಸುತ್ತಿರುವುದರಿಂದ ವಾಹನ ಸಂಚಾರಕ್ಕೆ ಮೊದಲಿಗಿಂತಲೂ ಹೆಚ್ಚಿನ ಅಡಚಣೆಯಾಗುತ್ತಿದೆ ಎಂದರು. ಜತೆಗೆ ಅರ್ಜಿದಾರರ ಪರವಾಗಿ ಸುಗಮ ವಾಹನ ಸಂಚಾರಕ್ಕೆ ಏನೇನು ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ನ್ಯಾಯಾಲಯಕ್ಕೆ ಸಲಹೆಗಳ ಪಟ್ಟಿಯನ್ನು ಸಲ್ಲಿಕೆ ಮಾಡಿದರು.

ಶಾಲಾ ಬದಲಾವಣೆ ಅವಶ್ಯವಿಲ್ಲ:ಬೆಂಗಳೂರು ನಗರದ ಸಂಚಾರ ದಟ್ಟಣೆಯು ಕೇವಲ ಶಾಲಾ ಸಮಯದ ಮಾತ್ರ ಉಂಟಾಗುತ್ತಿಲ್ಲ. ಸಂಚಾರ ದಟ್ಟಣೆಯ ಒಟ್ಟಾರೆ ವಾಹನಗಳ ಬಳಕೆ ವಿವಿಧ ಕಚೇರಿಗಳು, ಕೈಗಾರಿಕೆಗಳು ಮತ್ತು ಇತರೆ ಸ್ಥಳಗಳಿಗೆ ತೆರಳುವ ವಾಹನಗಳಿಂದಲೂ ಉಂಟಾಗುತ್ತಿದೆ. ಸಂಚಾರ ದಟ್ಟಣೆಯನ್ನು ತಪ್ಪಿಸಲು ಶಾಲೆಗಳನ್ನು ಶೀಘ್ರ ಆರಂಭಿಸಿದಲ್ಲಿ ಮಕ್ಕಳ ನಿದ್ರೆ, ಊಟ, ಉಪಚಾರ ನಿಗದಿತ ಸಮಯಕ್ಕೆ ಆಗದೇ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಒಟ್ಟಾರೆ ಅಭಿಪ್ರಾಯದಂತೆ ಪಸ್ತುತ ಇರುವ ಶಾಲಾ ಸಮಯದಲ್ಲಿ ಯಾವುದೇ ಬದಲಾವಣೆ ಅವಶ್ಯವಿಲ್ಲಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ತನ್ನ ವರದಿಯಲ್ಲಿ ತಿಳಿಸಿದ್ದಾರೆ.

ಶಾಲೆಗಳ ಸುತ್ತ-ಮುತ್ತ ವಾಹನ ದಟ್ಟಣೆ ತಪ್ಪಿಸಲು ಈ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ :

  • ಶಾಲಾ ಆವರಣದ ಒಳಗೆ ನಿಲುಗಡೆಗೆ ಅವಕಾಶ ಒದಗಿಸಲು ಸಾಧ್ಯ ಇರದೇ ಇರುವ ಶಾಲೆಗಳ ಸಮೀಪದಲ್ಲಿನಿರ್ದಿಷ್ಟ ಪಿಕ್ ಅಪ್ ಮತ್ತಯ ಡ್ರಾಪ್ ಪಾಯಿಂಟ್​ಗಳನ್ನು ನಿಗದಿ ಮಾಡುವುದು.
  • ಶಾಲೆಗಳ ಸಮೀಪದಲ್ಲಿ ಶಾಲಾ ಆರಂಭ ಮತ್ತು ಮುಕ್ತಾಯದ ಸಮಯದಲ್ಲಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಮತ್ತು ಸ್ವ ಇಚ್ಛೆಯುಳ್ಳ ಪಾಲಕರನ್ನು ಟ್ರಾಫಿಕ್ ವಾರ್ಡನ್​ಗಳನ್ನಾಗಿ ನೇಮಿಸಿ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳುವುದು.
  • ಹೆಚ್ಚಿನ ವಾಹನ ದಟ್ಟಣೆ ಉಂಟಾಗುವ ಶಾಲೆಗಳ ಸುತ್ತಮುತ್ತ ಲೋಕಲ್ ಏರಿಯಾ ಟ್ರಾಫಿಕ್ ಮ್ಯಾನೇಜ್ಮೆಂಟ್ ಪ್ಲಾನ್ ಜಾರಿಗೊಳಿಸುವುದು.
  • ಪೋಷಕರು ಮಕ್ಕಳನ್ನು ಶಾಲೆಗೆ ತಲುಪಿಸಲು ಮತ್ತು ಕರೆತರಲು ಸ್ವಂತ ವಾಹನಗಳನ್ನು ಬಳಸುವುದನ್ನು ತಪ್ಪಿಸಲು 3-4 ಶಾಲೆಗಳಿಗೆ ಒಟ್ಟುಗೂಡಿ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಬಿಎಂಟಿಸಿಯಿಂದ ಬಸ್ ಸೇವೆ ಒದಗಿಸುವುದು.

ಕಾರ್ಖಾನೆಗಳಿಂದ ವಾಹನ ದಟ್ಟಣೆ ಇಲ್ಲ :ಕಾರ್ಮಿಕ ಇಲಾಖೆ ಸಂಬಂಧಿಸಿದ ಕೈಗಾರಿಕಾ ಸಂಘಟನೆಗಳ ಜತೆ ವಿಸ್ತೃತ ಮಾತುಕತೆ ನಡೆಸಿದ ಬಳಿಕ ಕಾರ್ಖಾನೆಗಳಿಂಧ ವಾಹನ ದಟ್ಟಣೆ ಆಗುತ್ತಿಲ್ಲ, ಹಾಗಾಗಿ ಬದಲಾವಣೆ ಅಗತ್ಯವಿಲ್ಲಎಂದು ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಯಿಸಿನ್ ತಿಳಿಸಿದ್ದಾರೆ.

  • ಕಾರ್ಖಾನೆಗಳ ಸಿಬ್ಬಂದಿ ಕಾರ್ಯನಿರ್ವಹವಣೆಯಿಂದ ವಾಹನ ದಟ್ಟಣೆ ಉಂಟಾಗುತ್ತಿಲ್ಲ. ಅವರು ಬೆಳಗ್ಗೆ ೬ರಿಂದ ೯ರ ನಡುವೆ ಪ್ರಯಾಣ ಮಾಡುತ್ತಾರೆ ಮತ್ತು ಸಂಜೆಯ ನಂತರ ದುಡಿಯುವ ಸ್ಥಳದಿಂದ ಮನೆಗೆ ಮರಳುತ್ತಾರೆ.
  • ಹೊರವರ್ತುಲ ರಸ್ತೆಯಲ್ಲಿಕಾರ್ಯನಿರ್ವಹಣೆ ಮಾಡುತ್ತಿರುವ ಕಂಪನಿಗಳು ಹೈಬ್ರೀಡ್ ಮಾದರಿಯನ್ನು ಅಳವಡಿಸಿಕೊಳ್ಳುವುದನ್ನು ಉತ್ತೇಜಿಸಬೇಕು, ಇದರಿಂದ ರಸ್ತೆಗಳಲ್ಲಿನ ಸಂಚಾರ ದಟ್ಟಣೆ ತಗ್ಗುವುದಲ್ಲದೇ, ಕಚೇರಿಗೆ ಆಗಮಿಸುವ ಸಿಬ್ಬಂದಿ ಸಂಖ್ಯೆ ಇಳಿಮುಖವಾಗುತ್ತದೆ.
  • ಕಾರ್ಖಾನೆಗಳ ಸಮಯದ ಬದಲಾವಣೆ ಮಾಡುವುದರಿಂದ ಸಂಚಾರದಟ್ಟಣೆಯ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ.

ಇದನ್ನೂ ಓದಿ :ಏಕಕಾಲದಲ್ಲಿ ವಿವಿಧ ಕೋರ್ಸ್; ವಿದ್ಯಾರ್ಥಿನಿಯ ಸಿಎ ಅಭ್ಯಾಸದ ತೊಡಕು ಬಗೆಹರಿಸಿದ ಹೈಕೋರ್ಟ್

ABOUT THE AUTHOR

...view details