ಬೆಂಗಳೂರು : ಕೋವಿಡ್-19 ಕರ್ತವ್ಯದಲ್ಲಿ ತೊಡಗಿಸಿಕೊಂಡಿರುವ ಆಶಾ ಕಾರ್ಯಕರ್ತೆಯರು, ಪೊಲೀಸರು, ಗೃಹ ರಕ್ಷಕದಳ, ಅಗ್ನಿಶಾಮಕ ಸಿಬ್ಬಂದಿ, ಕಾರಾಗೃಹ ಸಿಬ್ಬಂದಿ, ಪೌರಕಾರ್ಮಿಕರು ಸೇರಿದಂತೆ ಕೊರೊನಾ ವಾರಿಯರ್ಸ್ಗೆ ಘೋಷಿಸಿರುವ 30 ಲಕ್ಷ ರೂ. ವಿಮೆ ಪರಿಹಾರ ಮೊತ್ತ ಹೆಚ್ಚಿಸಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ತಿಳಿಸಿದೆ.
ಪರಿಹಾರ ಹೆಚ್ಚಿಸಲು ನಿರಾಕರಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಪ್ರತಿಕ್ರಿಯಿಸಿರುವ ಹೈಕೋರ್ಟ್, ಇದಕ್ಕೆ ಸ್ಪಷ್ಟನೆ ನೀಡುವಂತೆ ನಿರ್ದೇಶಿಸಿದೆ. ಕೋವಿಡ್-19 ನಿರ್ವಹಣೆ ಸಂಬಂಧ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ಎ.ಎಸ್. ಓಕ ಹಾಗೂ ನ್ಯಾ. ಅರವಿಂದ ಕುಮಾರ್ ಅವರಿದ್ದ ವಿಭಾಗೀಯ ಪೀಠಕ್ಕೆ ಸರ್ಕಾರಕ್ಕೆ ಈ ನಿರ್ದೇಶನ ನೀಡಿದೆ.
ಹಿಂದಿನ ವಿಚಾರಣೆ ವೇಳೆ ಕೊರೊನಾ ವಾರಿಯರ್ಸ್ಗೆ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ 50 ಲಕ್ಷ ರೂ. ವಿಮೆ ನೀಡಿದೆ. ಕೇಂದ್ರದ ವ್ಯಾಪ್ತಿಗೆ ಒಳಪಡದ ಕೊರೊನಾ ವಾರಿಯರ್ಸ್ಗೂ ರಾಜ್ಯ ಸರ್ಕಾರ ಇದೇ ಮೊತ್ತದ ಪರಿಹಾರ ಘೋಷಿಸಲು ಕ್ರಮ ಜರುಗಿಸಬೇಕು ಎಂದು ಹೈಕೋರ್ಟ್ ಸೂಚಿಸಿತ್ತು.
ಹೈಕೋರ್ಟ್ ನಿರ್ದೇಶನಕ್ಕೆ ಲಿಖಿತ ಸ್ಪಷ್ಟನೆ ನೀಡಿರುವ ರಾಜ್ಯ ಸರ್ಕಾರ, ಕೋವಿಡ್-19 ಸೋಂಕಿತರನ್ನು ನೇರವಾಗಿ ನಿರ್ವಹಿಸುವ ರಾಜ್ಯದ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೂ ಕೇಂದ್ರದ 50 ಲಕ್ಷ ರೂ. ವಿಮೆ ಅನ್ವಯವಾಗುತ್ತದೆ. ಆದರೆ, ಕೊರೊನಾ ರೋಗಿಗಳನ್ನು ನೇರವಾಗಿ ನಿರ್ವಹಿಸದ ಆರೋಗ್ಯ ಕಾರ್ಯಕರ್ತರು ಮತ್ತು ಇತರ ಸಿಬ್ಬಂದಿಗೆ 30 ಲಕ್ಷ ರೂ. ಪರಿಹಾರ ಹೆಚ್ಚಿಸಲು ಸಾಧ್ಯವಿಲ್ಲ ಎಂದು ಆರ್ಥಿಕ ಇಲಾಖೆಯ ಮೆಮೊದಲ್ಲಿ ತಿಳಿಸಲಾಗಿದೆ.
ಲಿಖಿತ ಹೇಳಿಕೆ ದಾಖಲಿಸಿಕೊಂಡಿರುವ ಪೀಠ, ಕೇಂದ್ರ ಸರ್ಕಾರದ 50 ಲಕ್ಷ ರೂ. ವಿಮೆ ವ್ಯಾಪ್ತಿಗೆ ಒಳಪಡುವವರು ಮತ್ತು ರಾಜ್ಯ ಸರ್ಕಾರದ 30 ಲಕ್ಷ ರೂ. ಪರಿಹಾರದ ವ್ಯಾಪ್ತಿಯಲ್ಲಿ ಬರುವವರ ಕೆಲಸದಲ್ಲಿ ವ್ಯತ್ಯಾಸವಿಲ್ಲ. ಈ ಹಿನ್ನೆಲೆಯಲ್ಲಿ ಪರಿಹಾರ ಮೊತ್ತ 50 ಲಕ್ಷ ರೂ.ಗೆ ಹೆಚ್ಚಿಸಲು ಸೂಚಿಸಲಾಗಿತ್ತು. ಆದರೆ, ಪರಿಹಾರ ಹೆಚ್ಚಳ ಸಾಧ್ಯವಿಲ್ಲ ಎಂದು ಆರ್ಥಿಕ ಇಲಾಖೆ ಹೇಳಿದೆ. ಆದ್ದರಿಂದ ಈ ನಿಲುವು ತಾಳಿರುವುದಕ್ಕೆ ಸಕಾರಣಗಳನ್ನು ನೀಡಿ ಪ್ರಮಾಣಪತ್ರ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಇದೇ ವೇಳೆ, ರಾಜ್ಯದ ಎಲ್ಲ ನಗರಗಳಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರಿಗೆ ನಿಯಮಿತವಾಗಿ ಆಯಾ ತಿಂಗಳ ವೇತನ ಪಾವತಿ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.