ಕರ್ನಾಟಕ

karnataka

ETV Bharat / state

ಐಎಂಎ ವಂಚನೆ ಪ್ರಕರಣ.. ರೋಷನ್‌ ಬೇಗ್ ಆಸ್ತಿ ಜಪ್ತಿ ಮಾಡಲ್ಲ ಎಂದು ಕೋರ್ಟ್‌ಗೆ ಸರ್ಕಾರದ ಸ್ಪಷ್ಟನೆ..

ಸರ್ಕಾರದ ಪರ ವಕೀಲ ವಿಜಯಕುಮಾರ್ ಪಾಟೀಲ್ ಉತ್ತರ ನೀಡಿ, ರೋಷನ್ ಬೇಗ್ ವಿರುದ್ಧದ ಸಿಬಿಐ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಆದ್ದರಿಂದ ಈ ಹಂತದಲ್ಲಿ ಬೇಗ್ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು. ವಾದ ಒಪ್ಪದ ಪೀಠ ವಿಚಾರಣೆ ಮುಂದೂಡಿತು..

Roshan Beg
ರೋಷನ್‌ ಬೇಗ್ ಆಸ್ತಿ ಜಪ್ತಿಗೆ ನಿರಾಕರಿಸಿದ ಸರ್ಕಾರ

By

Published : Apr 16, 2021, 10:22 PM IST

ಬೆಂಗಳೂರು: ಐಎಂಎ ಹಗರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ಆರ್ ರೋಷನ್ ಬೇಗ್ ವಿರುದ್ಧದ ಸಿಬಿಐ ತನಿಖೆ ಪೂರ್ಣಗೊಳ್ಳದ ಕಾರಣ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಈ ಹಂತದಲ್ಲಿ ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಹೈಕೊರ್ಟ್‌ಗೆ ತಿಳಿಸಿದೆ.

ಈ ವಾದ ಒಪ್ಪದ ಹೈಕೋರ್ಟ್​, ಆರೋಪಿಯು ಹಣಕಾಸಿನ ಲಾಭ ಮಾಡಿದ್ದರೆ ಆಸ್ತಿ ಮುಟ್ಟುಗೋಲು ಹಾಕಿಕೊಕೊಳ್ಳಬಹುದು. ಅದರಂತೆ ಮಾಜಿ ಸಚಿವ ರೋಷನ್‌ ಬೇಗ್ ಮೇಲೆ ಐಎಂಎ ಹಗರಣದಲ್ಲಿ ಹಣಕಾಸಿನ ಲಾಭ ಪಡೆದಿರುವ ಆರೋಪ ಇರುವುದರಿಂದ ಅವರ ವೈಯಕ್ತಿಕ ಆಸ್ತಿ ಜಪ್ತಿ ಮಾಡಲು ಸರ್ಕಾರಕ್ಕೆ ಅಧಿಕಾರವಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಅಲ್ಲದೆ, ಐಎಂಎ ಸಂಸ್ಥೆಯು ಸರ್ಕಾರಿ ಶಾಲೆಗೆ ₹10 ಕೋಟಿ ದೇಣಿಗೆ ನೀಡಿದೆ. ಆ ಹಣವನ್ನು ಠೇವಣಿದಾರರಿಗೆ ಸರ್ಕಾರವು ವಾಪಸ್ ನೀಡಬೇಕಿದೆ. ಈ ಕುರಿತು ಶನಿವಾರ ಆದೇಶ ಹೊರಡಿಸುವುದಾಗಿ ತಿಳಿಸಿದ ಪೀಠ ವಿಚಾರಣೆಯನ್ನ ಮುಂದೂಡಿದೆ.

ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ಇಮ್ರಾನ್ ಪಾಷಾ ಹಾಗೂ ಮತ್ತಿತರ ಠೇವಣಿದಾರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ರಾಜ್ಯ ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿದ ಪೀಠ, ರೋಷನ್ ಬೇಗ್ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಶೀಘ್ರ ನಿರ್ಧಾರ ಕೈಗೊಳ್ಳುವಂತೆ 2021ರ ಮಾ.18ರಂದು ಹೈಕೋರ್ಟ್ ನಿರ್ದೇಶಿಸಿತ್ತು.

ಈ ನಿಟ್ಟಿನಲ್ಲಿ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದಿತು. ಇದಕ್ಕೆ ಸರ್ಕಾರದ ಪರ ವಕೀಲ ವಿಜಯಕುಮಾರ್ ಪಾಟೀಲ್ ಉತ್ತರ ನೀಡಿ, ರೋಷನ್ ಬೇಗ್ ವಿರುದ್ಧದ ಸಿಬಿಐ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಆದ್ದರಿಂದ ಈ ಹಂತದಲ್ಲಿ ಬೇಗ್ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು. ವಾದ ಒಪ್ಪದ ಪೀಠ ವಿಚಾರಣೆ ಮುಂದೂಡಿತು.

ABOUT THE AUTHOR

...view details