ಬೆಂಗಳೂರು :ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಮುಕ್ತ ಅವಕಾಶಗಳನ್ನು ಕಲ್ಪಿಸಿ ಹೊಸ ಉದ್ಯಮ ಹಾಗೂ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೈಗಾರಿಕಾ ಸ್ನೇಹಿ ನೀತಿಗಳನ್ನು ಜಾರಿಗೆ ತರಲು ಮುಂದಾಗಿದೆ.
ಕೊರೊನಾದಂತಹ ಸಂಕಷ್ಟದ ಸಂದರ್ಭದಲ್ಲೂ ಸುಮಾರು 1.5 ಕೋಟಿ ರೂ. ಹೂಡಿಕೆ ರಾಜ್ಯಕ್ಕೆ ಹರಿದು ಬಂದಿದೆ. ಈ ಹೂಡಿಕೆಯನ್ನು ಮತ್ತಷ್ಟು ಹೆಚ್ಚಿಸುವುದು ಸರ್ಕಾರದ ಉದ್ದೇಶ. ಹಾಗಾಗಿ, ರಾಜ್ಯದಲ್ಲಿ ಹೂಡಿಕೆ ಮಾಡಲು ಮುಂದೆ ಬರುವ ಹೂಡಿಕೆದಾರರಿಗೆ ಯಾವುದೇ ತೊಂದರೆ ಆಗದಂತೆ ಕ್ರಮಕೈಗೊಳ್ಳಲು ಸರ್ಕಾರ ಮುಂದಾಗಿದೆ.
ನೆರೆ ರಾಜ್ಯಗಳಿಂದಲೂ ಹೂಡಿಕೆ ಆಕರ್ಷಣೆಗೆ ಪೈಪೋಟಿ ಆರಂಭವಾಗಿದೆ. ಕಳೆದ ಹಲವು ವರ್ಷಗಳಿಂದ ಹೂಡಿಕೆಯಲ್ಲಿ ಮೊದಲ ಸ್ಥಾನದಲ್ಲಿರುವ ನಮ್ಮ ರಾಜ್ಯ, ಇನ್ನಷ್ಟು ಹೂಡಿಕೆ ಸ್ನೇಹಿ ಕ್ರಮಗಳಿಗೆ ಸರ್ಕಾರ ಚಾಲನೆ ನೀಡುತ್ತಿದೆ.
ಹೂಡಿಕೆಗೆ ಅವಕಾಶಗಳೇನು? :ಎಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್, ಆಟೋಮೊಬೈಲ್ ಮತ್ತು ವಿದ್ಯುತ್ ಚಾಲಿತ ವಾಹನ, ಏರೋಸ್ಪೇಸ್ ಮತ್ತು ಡಿಫೆನ್ಸ್, ಸ್ಟೀಲ್ ಮತ್ತು ಸಿಮೆಂಟ್,ಎಫ್‌ಎಂಸಿಜಿ ಮತ್ತು ಆಹಾರ ಸಂಸ್ಕರಣೆ, ಜವಳಿ ಹಾಗೂ ಆಟಿಕೆ ವಲಯದಲ್ಲಿ ಹೂಡಿಕೆ ಅವಕಾಶಗಳನ್ನು ತೆರೆದಿಡುತ್ತಿದೆ. ಹೂಡಿಕೆದಾರರಿಗೂ ಮನವರಿಕೆ ಮಾಡಿಕೊಡಲಾಗುತ್ತಿದೆ.
ಉದ್ಯೋಗ ಸೃಷ್ಟಿ :ರಾಜ್ಯ ಸರ್ಕಾರ 2022ರ ನವೆಂಬರ್ 2 ರಿಂದ 3 ದಿನ ಬೆಂಗಳೂರಿನಲ್ಲಿ ಹೂಡಿಕೆದಾರರ ಸಮಾವೇಶ ನಡೆಸಲಿದೆ. 7.5 ಲಕ್ಷ ಕೋಟಿ ರೂ. ಹೂಡಿಕೆ ಆಕರ್ಷಣೆ ಗುರಿ ಇಟ್ಟುಕೊಂಡಿದೆ. ಅದರಲ್ಲಿ ಕನಿಷ್ಠ 5 ಲಕ್ಷ ಉದ್ಯೋಗ ಸೃಷ್ಟಿಸುವಂತೆ ಮಾಡುವುದು ಸರ್ಕಾರದ ಉದ್ದೇಶ.
ಹೂಡಿಕೆಗೆ ಹೆಚ್ಚಿನ ಅವಕಾಶಗಳಿರುವ ಏಳು ಹೊಸ ವಲಯಗಳನ್ನು ಗುರುತಿಸಿದೆ. ಮುಂದಿನ 9 ವರ್ಷಗಳಲ್ಲಿ 11 ಕೈಗಾರಿಕಾ ಕ್ಲಸ್ಟರ್‌ಗಳಿಂದ 9 ಲಕ್ಷ ಉದ್ಯೋಗ ಸೃಷ್ಟಿಸುವ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಮುಂದಿನ ಹೂಡಿಕೆದಾರರ ಸಮಾವೇಶಕ್ಕೆ ವಿದ್ಯಾರ್ಥಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಆಹ್ವಾನಿಸಲು ನಿರ್ಧರಿಸಲಾಗಿದೆ. ಯಾಕೆಂದರೆ, ಉದ್ಯಮಿಯಾಗು, ಉದ್ಯೋಗ ನೀಡು ಎಂಬುದು ಇದರ ಉದ್ದೇಶ. ವಿದ್ಯಾರ್ಥಿಗಳು ಬಂದಲ್ಲಿ ಉದ್ಯಮ ಸ್ಥಾಪನೆಗೆ ಒಲವು ಮೂಡಬಹುದು ಎಂಬುದು ಸರ್ಕಾರದ ಉದ್ದೇಶವಾಗಿದೆ.
ಹೂಡಿಕೆ ಎಷ್ಟು?: 2020-21-56884 ಕೋಟಿ ರೂ. ಮಾಡಲಾಗಿದೆ. 2021-22 - 62085 ಕೋಟಿ ರೂ. ನಿರೀಕ್ಷಿಸಲಾಗಿದೆ.
ಹೊಸ ನೀತಿಯಲ್ಲಿ ಏನಿದೆ?: ಹೊಸ ಕ್ಷೇತ್ರದಲ್ಲಿ ಹೂಡಿಕೆ ಹರಿದು ಬರಲು ಸಹಕಾರಿಯಾಗುವಂತೆ ಹೊಸ ಹೊಸ ನೀತಿಗಳನ್ನು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ. ರಾಜ್ಯದ ನೂತನ ಕೈಗಾರಿಕಾ ನೀತಿ 2020-25 ಜಾರಿಯಲ್ಲಿದೆ. ಅದಕ್ಕೆ ಪೂರಕವಾಗಿ ದೇಶದ ಬೇರೆ ಬೇರೆ ರಾಜ್ಯಗಳಲ್ಲಿರುವ ಎಲ್ಲ ನೀತಿಗಳನ್ನು ರಾಜ್ಯಕ್ಕೆ ತರುವುದಕ್ಕೂ ನಿರ್ಧರಿಸಲಾಗಿದೆ.