ಬೆಂಗಳೂರು: ಸರ್ಕಾರ ಪ್ರತಿ ವರ್ಷ ಮಾಜಿ ಶಾಸಕರ ಪಿಂಚಣಿ, ವೈದ್ಯಕೀಯ ಭತ್ಯೆಗಳಿಗಾಗಿ ಕೋಟ್ಯಂತರ ರೂಪಾಯಿ ಹಣ ವ್ಯಯಿಸುತ್ತಿದೆ. ಈ ಸಂಬಂಧ ಆರ್‌ಟಿಐ ಕಾರ್ಯಕರ್ತರೊಬ್ಬರು ಮಾಹಿತಿ ಹಕ್ಕು ಮೂಲಕ ಪಡೆದ ಮಾಹಿತಿಯಲ್ಲಿ ಮಾಜಿಗಳಿಂದ ಸರ್ಕಾರದ ಬೊಕ್ಕಸದ ಮೇಲಾಗುತ್ತಿರುವ ಹೊರೆ ಬಯಲಾಗಿದೆ. ಒಂದು ಸಾರಿ ಶಾಸಕನಾದರೆ ಸಾಕು ಆ ವ್ಯಕ್ತಿಗೆ ಜೀವನ ಪೂರ್ತಿ ಭತ್ಯೆಗಳು, ಪಿಂಚಣಿಯನ್ನು ಸರ್ಕಾರ ಪಾವತಿಸಬೇಕಾಗುತ್ತದೆ.
ಮಾಜಿ ಶಾಸಕರ ಹೊರೆ ಏನು?:2013 ರಿಂದ 2021ರವರೆಗೆ ಪಿಂಚಣಿ ಹಾಗೂ ವೈದ್ಯಕೀಯ ಭತ್ಯೆ ರೂಪದಲ್ಲಿ 440 ಮಾಜಿ ವಿಧಾನಸಭೆ ಸದಸ್ಯರಿಗೆ ಸರ್ಕಾರ ಬೊಕ್ಕಸದಿಂದ ವಾರ್ಷಿಕ 26.4 ಕೋಟಿ ರೂಪಾಯಿ ಪಾವತಿಸುತ್ತಿದೆ. ಅದರಂತೆ ಮಾಸಿಕವಾಗಿ ಮಾಜಿ ಶಾಸಕರಿಗೆ 2.2 ಕೋಟಿ ರೂ. ಪಿಂಚಣಿ, ವೈದ್ಯಕೀಯ ಭತ್ಯೆ ಸರ್ಕಾರ ಪಾವತಿಮಾಡುತ್ತಿದೆ. ಮಾಜಿ ಶಾಸಕರಿಗೆ ಪಿಂಚಣಿಯಾಗಿ ತಲಾ 45,000 ರೂ. ಪಾವತಿಸಲಾಗುತ್ತಿದ್ದರೆ, ವೈದ್ಯಕೀಯ ಭತ್ಯೆ ರೂಪದಲ್ಲಿ 5,000 ರೂ. ಪಾವತಿಸಲಾಗುತ್ತಿದೆ.