ಬೆಂಗಳೂರು:ಕೊರೊನಾ ಹರಡುವುದನ್ನು ತಪ್ಪಿಸಲು ಬಿಬಿಎಂಪಿಯ ಎಲ್ಲಾ ಸೇವೆಗಳನ್ನು ಆನ್ಲೈನ್ ಮೂಲಕವೇ ನಿರ್ವಹಿಸಬೇಕೆಂದು ನಗರಾಭಿವೃದ್ಧಿ ಇಲಾಖೆ ಬಿಬಿಎಂಪಿಗೆ ನಿರ್ದೇಶನ ನೀಡಿದೆ.
ಈಗಾಗಾಲೇ ಬಿಬಿಎಂಪಿ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಅಂಗವಾಗಿ ಆಸ್ತಿ ತೆರಿಗೆ ಪಾವತಿ, ವಾಣಿಜ್ಯ ಪರವಾನಗಿ ನವೀಕರಣ, ಕಟ್ಟಡ ನಕ್ಷೆ ಮಂಜೂರಾತಿ, ಸ್ವಾಧೀನಾನುಭವ ಪತ್ರ, ಇ-ಆಸ್ತಿ ಪತ್ರ ಸೇರಿದಂತೆ ಹಲವು ಸೇವೆಗಳನ್ನು ಆನ್ಲೈನ್ ಮಾಡಿದೆ.
ಆದರೆ ಕೋವಿಡ್ ಇರುವ ಹಿನ್ನೆಲೆ ಸಾರ್ವಜನಿಕರ ಕಚೇರಿ ಅಲೆದಾಟ ತಪ್ಪಿಸಲು ಇನ್ನಷ್ಟು ಪರಿಣಾಮಕಾರಿಯಾಗಿ ಆನ್ಲೈನ್ ಮೂಲಕ ಅರ್ಜಿಗಳ ಸಲ್ಲಿಕೆ ನಿರ್ವಹಣೆಯನ್ನು ಕಡ್ಡಾಯಗೊಳಿಸಲು ಸೂಚಿಸಿದೆ. ಭೌತಿಕ ಸಂಪರ್ಕ ಇಲ್ಲದೆ, ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಕೆ, ಅನುಮೋದನೆಗೆ ಸೂಚಿಸಿದೆ. ಪ್ರತೀ ಸೇವೆಗೂ ಶುಲ್ಕವನ್ನು ನಿಗದಿ ಮಾಡಲಾಗಿದ್ದು, ಆನ್ಲೈನ್ ಮೂಲಕವೇ ಪಾವತಿಗೆ ಸೂಚಿಸಲಾಗಿದೆ.
ಜೊತೆಗೆ ಅರ್ಜಿ ಮಂಜೂರು ಮಾಡಲು ಗಡುವು ನೀಡಲಾಗಿದ್ದು, ಆ ಗಡುವಿನೊಳಗೆ ಮಂಜೂರು ಮಾಡದಿದ್ದರೆ ಅರ್ಜಿಗಳು ಸ್ವಯಂ ಅನುಮೋದನೆಗೊಳ್ಳಲಿವೆ. ಕಟ್ಟಡ ನಿರ್ಮಿಸುವವರು ಅರ್ಜಿ ಸಲ್ಲಿಸಿದ ಕೇವಲ 30 ದಿನದೊಳಗೆ ನಕ್ಷೆ ಮಂಜೂರು ಮಾಡಬೇಕು. 7 ದಿನಗಳ ಗಡುವಿನಲ್ಲಿ ಕಟ್ಟಡ ಮುಕ್ತಾಯದ ದೃಢೀಕರಣ ಪತ್ರ ನೀಡಬೇಕು. ಹಾಗೂ 15 ದಿನದೊಳಗೆ ವಾಸ ಯೋಗ್ಯ ಪ್ರಮಾಣಪತ್ರ ನೀಡಬೇಕು. ಈ ಗಡುವಿನೊಳಗೆ ಮಂಜೂರಾತಿ ಹಗೂ ದೃಢೀಕರಣ ಪತ್ರ ನೀಡದಿದ್ದರೆ ಸಲ್ಲಿಕೆಯಾದ ಅರ್ಜಿ ಸ್ವಯಂ ಅನುಮೋದನೆಗೊಳ್ಳತ್ತದೆ. ಗಡುವಿನೊಳಗೆ ಕೆಲಸ ಮುಗಿಸದಿದ್ದಲ್ಲಿ ಅಧಿಕಾರಿಗಳು ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.
ನಿವೇಶನದ ಮೇಲಿನ ತೆರಿಗೆ, ರಸ್ತೆ ಅಗೆಯಲು ಅನುಮತಿಯನ್ನು ಆನ್ಲೈನ್ ಮೂಲಕವೇ ಮಾಡಿ, ರಸ್ತೆ ಅಗೆದ ನಂತರ ಪುನರ್ ನಿರ್ಮಾಣದ ಬಗ್ಗೆ ಸ್ಥಳ ಪರಿಶೀಲನೆ ಮಾಡಬೇಕು. ಆಹಾರಕ್ಕೆ ಸಬಂಧಿಸಿದಂತೆ ಹೋಟೆಲ್, ಆಹಾರ ವಸ್ತುಗಳ ಮಾರಾಟಕ್ಕೆ ಸಂಬಂಧಿಸಿದ ಉದ್ದಿಮೆಗೆ ನಿರಪೇಕ್ಷಣಾ ಪತ್ರ, ಹಾಸ್ಟೆಲ್, ಪಿಜಿ, ಪ್ಲೇ ಸ್ಕೂಲ್ಗಳಿಗೆ ಮಂಜೂರಾತಿ, ಆಡಿಟೋರಿಯಂ, ಮನರಂಜನಾ ಕೇಂದ್ರಗಳಿಗೆ ಪರವಾನಗಿ ಸಹ ಆನ್ಲೈನ್ ಮಾಡಲು ಸೂಚಿಸಲಾಗಿದೆ.
ಆನ್ಲೈನ್ನಲ್ಲಿ ಸಲ್ಲಿಕೆಯಾಗುವ ಅರ್ಜಿ ಭರ್ತಿ ವಿಚಾರದಲ್ಲಿ ಗೊಂದಲಗಳಿದ್ರೆ ಅರ್ಜಿದಾರರಿಗೆ ಸ್ಪಷ್ಟವಾಗಿ ತಿಳಿಸಬೇಕು. ಅನಗತ್ಯವಾಗಿ ನಿರಾಕರಿಸುವಂತಿಲ್ಲ ಎಂದು ಹೇಳಲಾಗಿದೆ. ಈಗಾಗಲೇ ಇರುವಂತೆ ಹೊಸದಾಗಿ ಉದ್ದಿಮೆ ಆರಂಭಿಸಲು ಹಾಗೂ ಪರವಾನಗಿ ನವೀಕರಣವನ್ನು ಆನ್ಲೈನ್ ಮೂಲಕವೇ ಐದು ವರ್ಷ ಅವಧಿ ಇರುವಂತೆ ನವೀಕರಣ ಮಾಡಿಕೊಡಲು ಬಿಬಿಎಂಪಿಗೆ ನಿರ್ದೇಶನ ನೀಡಿದೆ.