ಬೆಂಗಳೂರು: ರಾಜ್ಯ ಸರಕಾರದ ಸಚಿವಾಲಯ ಸಿಬ್ಬಂದಿ ಕಡ್ಡಾಯವಾಗಿ ಬೆಳಗ್ಗೆ 10 ಗಂಟೆಗೆ ಕರ್ತವ್ಯಕ್ಕೆ ಹಾಜರಾಗಿರಬೇಕೆಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿದೆ.
ವಿಧಾನಸೌಧದಲ್ಲಿ ಬಹುತೇಕ ನೌಕರರು ಬೆಳಗ್ಗೆ 10 ಗಂಟೆಗೆ ಕೆಲಸಕ್ಕೆ ಹಾಜರಾಗುತ್ತಿರಲಿಲ್ಲ. ಇದನ್ನು ಗಮನಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದ್ದು, ಸಿಎಂ ಆದೇಶ ಮೇರೆಗೆ ಸಚಿವಾಲಯದ ಸಿಬ್ಬಂದಿಗೆ ಸುತ್ತೋಲೆ ಹೊರಡಿಸಲಾಗಿದೆ. ಸಕಾಲಕ್ಕೆ ಸರಿಯಾಗಿ ಹಾಜರಿರದ ಸಿಬ್ಬಂದಿ ಮತ್ತು ಕೆಲಸದ ವೇಳೆಯಲ್ಲಿ ಅವರವರ ಸ್ಥಾನದಲ್ಲಿ ಇರದೇ ಇರುವ ಸಿಬ್ಬಂದಿ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ತಗೆದುಕೊಳ್ಳಲಾಗುವುದೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಸಚಿವಾಲಯ ಸಿಬ್ಬಂದಿಗೆ ಸರಕಾರ ಆದೇಶ ಸಚಿವಾಲಯದ ಮೇಲಾಧಿಕಾರಿಗಳು ಎ.ಎಂ.ಎಸ್ ಹಾಜರಾತಿಯನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಕಚೇರಿಗೆ ತಡವಾಗಿ ಬಂದ ನೌಕರರಿಗೆ ದಿನಗಳ ಆಧಾರದ ಮೇಲೆ ಅವರ ರಜೆಗಳಲ್ಲಿ ಕಡಿತಗೊಳಿಸಬೇಕು ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ. ನೌಕರರು ಬೆಳಗ್ಗೆ 10ಕ್ಕೆ ಸರಿಯಾಗಿ ಕಚೇರಿಗೆ ಆಗಮಿಸಿ ಸಂಜೆ 5:30ಕ್ಕೆ ಕರ್ತವ್ಯ ಮುಗಿಸಿ ತೆರಳಬೇಕು. ಕಚೇರಿ ಸಮಯ ಪಾಲನೆಯಲ್ಲಿ ಅಶಿಸ್ತು ಕಂಡುಬಂದರೆ ನಿಯಮಾನುಸಾರ ಮೇಲಧಿಕಾರಿಗಳು ಕ್ರಮ ತಗೆದುಕೊಳ್ಳಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸರಕಾರದ ಅಪರ ಮುಖ್ಯಕಾರ್ಯದರ್ಶಿ ವಿ. ಮಂಜುಳ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಸಚಿವಾಲಯ ಸಿಬ್ಬಂದಿಗೆ ಸರಕಾರ ಆದೇಶ ಮುಖ್ಯಮಂತ್ರಿ ಯಡಿಯೂರಪ್ಪ ಈ ತಿಂಗಳ 1ನೇ ತಾರೀಖಿನಂದು ಅನಿರೀಕ್ಷಿತವಾಗಿ ಸಚಿವಾಲಯ ಕಚೇರಿಗೆ ಭೇಟಿ ನೀಡಿದಾಗ ಬಹಳಷ್ಟು ಸಿಬ್ಬಂದಿ ಬೆಳಗ್ಗೆ 10ಗಂಟೆಗೆ ಹಾಜರಾಗಿರಲಿಲ್ಲ. ಕೆಲಸಕ್ಕೆ ತಡವಾಗಿ ಬರುತ್ತಿರುವುದು ಹಾಗೂ ಕೆಲಸದ ಸಮಯದಲ್ಲಿ ಕಚೇರಿಯಲ್ಲಿ ಇರದೇ ಇರುವುದು ಕಂಡುಬಂದ ಹಿನ್ನೆಲೆ ಈ ಆದೇಶ ಜಾರಿಮಾಡಲಾಗಿದೆ.