ಬೆಂಗಳೂರು: ಬಹಿರಂಗವಾಗಿ ಜಟಾಪಟಿಗಿಳಿದಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ.ರೂಪಾ ವಿರುದ್ಧ ಇಲಾಖಾ ವಿಚಾರಣೆಗೆ ಸರ್ಕಾರ ಆದೇಶಿಸಿದೆ. ಈಗಾಗಲೇ ಇಬ್ಬರು ಅಧಿಕಾರಿಗಳನ್ನು ಸ್ಥಳ ನಿಗದಿ ಮಾಡದೇ ಎತ್ತಂಗಡಿ ಮಾಡಲಾಗಿದೆ. ಇದೀಗ ಮಹಿಳಾ ಅಧಿಕಾರಿಗಳಿಗೆ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿದ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆಗೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಆದೇಶಿಸಿದ್ದಾರೆ.
ಸಿಎಂ ಬೊಮ್ಮಾಯಿ ಸೂಚನೆ ಮೇರೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಇಲಾಖಾ ವಿಚಾರಣೆಗೆ ಆದೇಶ ಹೊರಡಿಸಿದ್ದಾರೆ. ಆ ಮೂಲಕ ಶಿಸ್ತು ಉಲ್ಲಂಘಿಸಿದ ಅಧಿಕಾರಿಗಳ ನಡೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಡಿ.ರೂಪಾ ವಿರುದ್ಧ ಮಾಧ್ಯಮ ಮುಂದೆ ಬಹಿರಂಗ ಹೇಳಿಕೆ, ಸಾಮಾಜಿಕ ಜಾಲತಾಣದಲ್ಲಿ ಫೋಟೋ ಪ್ರಕಟಣೆ, ಆ ಮೂಲಕ ಸರ್ಕಾರಕ್ಕೆ ಮುಜುಗರ ಉಂಟು ಮಾಡಿರುವುದನ್ನು ತನಿಖಾ ವ್ಯಾಪ್ತಿಗೆ ಒಳಪಡಿಸಲಾಗುವುದು. ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ದ ಈಜುಕೊಳ ನಿರ್ಮಾಣ, ಪಾರಂಪರಿಕ ಕಟ್ಟಡ ನಿಯಮಾವಳಿ ಉಲ್ಲಂಘನೆ ಆರೋಪ ಹಾಗೂ ಬ್ಯಾಗ್ ಖರೀದಿ ಪ್ರಕರಣಗಳು ಇಲಾಖೆ ತನಿಖಾ ವ್ಯಾಪ್ತಿಗೆ ಒಳಪಡಲಿದೆ. ಇಬ್ಬರು ಅಧಿಕಾರಿಗಳ ವಿರುದ್ಧ ಸಿವಿಲ್ ಸೇವಾ ನಿಯಮಾವಳಿ ಉಲ್ಲಂಘನೆಯನ್ನೂ ತನಿಖೆಗೆ ಒಳಪಡಿಸಲಾಗುವುದು.
ರೋಹಿಣಿ ಸಿಂಧೂರಿ ಹಾಗೂ ಡಿ.ರೂಪಾ ಫೆ. 20ರಂದು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಭೇಟಿಯಾಗಿ ದಾಖಲೆಗಳೊಂದಿಗೆ ಪರಸ್ಪರ ದೂರು ನೀಡಿದ್ದರು. ಬಳಿಕ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ನೋಟಿಸ್ ನೀಡಿದೆ. ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತೆಯಾಗಿದ್ದ ರೋಹಿಣಿ ಸಿಂಧೂರಿಯನ್ನು ಸ್ಥಳ ನಿಗದಿಗೊಳಿಸದೇ ವರ್ಗಾವಣೆ ಮಾಡಲಾಗಿದ್ದರೆ, ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಎಂಡಿ ಹುದ್ದೆಯಿಂದ ಡಿ. ರೂಪಾ ಅವರನ್ನೂ ಕೂಡಾ ಸ್ಥಳ ನಿಗದಿ ಮಾಡದೇ ವರ್ಗಾವಣೆ ಮಾಡಲಾಗಿದೆ.